ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ‘ಕಾಂಗ್ರೆಸ್ ಪಕ್ಷ ಹಾಗೂ ರಾಜಕಾರಣದ ಪರಿವಾರಕ್ಕೆ ಧೃವನಾರಾಯಣ ಅವರ ಅಗಲಿಕೆ ದೊಡ್ಡ ಆಘಾತ ತಂದಿದೆ. ಭಗವಂತ ಯಾಕೆ ಇಷ್ಟು ಕ್ರೂರಿಯಾಗಿದ್ದಾನೆ ಎಂದು ತಿಳಿಯುತ್ತಿಲ್ಲ. ಧೃವನಾರಾಯಣ ಅವರು ಅಜಾತ ಶತ್ರು. ಕಾಂಗ್ರೆಸ್ ಪಕ್ಷಕ್ಕೆ ಧೃವತಾರೆಯಾಗಿ ಸಮಾಜದ ಎಲ್ಲ ಸಮಾಜದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದ ಸರಳ ನಾಯಕರು.
ತಮಗೆ ಕೊಟ್ಟ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿಭಾಯಿಸಿ ಪಕ್ಷಕ್ಕೆ ನಿಷ್ಠೆ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿ ಇದ್ದರು. ನಮ್ಮ ಕಾರ್ಯಾಧ್ಯಕ್ಷರಾಗಿ ಕೋವಿಡ್ ಸಮಯದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ, ಅವರ ಬದ್ಧತೆ ಅವಿಸ್ಮರಣೀಯ.
ನನ್ನ ಹಾಗೂ ಧೃವನಾರಾಯಣ ಅವರ ಸ್ನೇಹವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು ನನಗೆ ಕೇವಲ ಕಾರ್ಯಾಧ್ಯಕ್ಷರಾಗಿರಲ್ಲಿಲ್ಲ. ನನ್ನ ಸಹೋದರನಂತೆ ಕುಟುಂಬದ ಸದಸ್ಯರಾಗಿದ್ದರು. ನನ್ನ ರಾಜಕೀಯ ಪಯಣದಲ್ಲಿ ಧೃವನಾರಾಯಣ ಅವರು ನನ್ನ ಜತೆ ಹೆಜ್ಜೆ ಹಾಕಿದ್ದರು. ಪಕ್ಷದ ಸಿದ್ಧಾಂತವನ್ನು ಸಮರ್ಥವಾಗಿ ಪ್ರತಿಪಾದಿಸಿಕೊಂಡು, ಜನಸಾಮಾನ್ಯರ ಜತೆ ಸಾಮಾನ್ಯನಾದಗಿ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ನಾಯಕ ಧೃವನಾರಾಯಣ ಅವರು.
ಬೆಳಗ್ಗೆ 6.30ಕ್ಕೆ ನಮ್ಮ ಮನೆಯವರಿಗೆ ಧೃವನಾರಾಯಣ ಅವರ ಪರಿಸ್ಥಿತಿಗೆ ಬಗ್ಗೆ ಕರೆ ಮಾಡಿ ತಿಳಿಸಿದ್ದರು. ಇದಾದ ಐದು ನಿಮಿಷಕ್ಕೆ ಅವರು ನಮ್ಮನ್ನು ಅಗಲಿದ್ದಾರೆ ಎಂದು ಸುದ್ದಿ ಬಂತು. ಅವರು ಕಾಂಗ್ರೆಸ್ ಕುಟುಂಬದ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಬಂದಿದ್ದರು. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು ಜಿಲ್ಲೆಗಳ ಉಸ್ತುವಾರಿ ಹೊತ್ತು, ಪಕ್ಷದಲ್ಲಿನ ಸಮಸ್ಯೆ ಬಗೆಹರಿಸಿಕೊಂಡು ಬರುತ್ತಿದ್ದರು.
1983ರಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಧೃವನಾರಾಯಣ ಅವರ ಜತೆ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆ. ಅವರು ಎನ್ಎಸ್ ಯುಐ ಅಧ್ಯಕ್ಷರಾಗಿ, ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಮಾಡಿದ್ದರು. ನಾನು ಬೇಗನೆ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಅವರು ಮಾತ್ರ ಸುದೀರ್ಘ 2 ದಶಕಗಳ ಕಾಲ ಪಕ್ಷ ಸಂಘಟನೆ ಮಾಡಿ ನಂತರ ಚುನಾವಣೆಗೆ ಸ್ಪರ್ಧಿಸಿದರು. ಶಾಸಕರಾಗಿ, ಸಂಸದರಾಗಿ ಜನಸೇವೆ ಮಾಡಿದ್ದ ಧೃವನಾರಾಯಣ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರು.
ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ನಾನು ಎಲ್ಲೇ ಹೋದರು, ಆ ಕಾರ್ಯಕ್ರಮಗಳ ಆಯೋಜನೆ ಜವಾಬ್ದಾರಿ ತೆಗೆದುಕೊಂಡು ನನಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು. ನಂಜನಗೂಡು ಪ್ರಜಾಧ್ವನಿ ಯಾತ್ರೆಯನ್ನು ಅಭೂತಪೂರ್ವವಾಗಿ ಆಯೋಜಿಸಿದ್ದರು. ಅವರ ಬಯಕೆ ಏನಿತ್ತು, ನಾವು ಏನು ತೀರ್ಮಾನ ಮಾಡಿದ್ದೆವು ಎಂಬುದನ್ನು ಈ ವೇದಿಕೆಯಲ್ಲಿ ಮಾತನಾಡುವುದಿಲ್ಲ. ನಾವು ಅವರನ್ನು ಕಳೆದುಕೊಂಡಿದ್ದೇವೆ. ನಮ್ಮ ಎಐಸಿಸಿ ಎಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಳ ಆತ್ಮೀಯರಾಗಿದ್ದರು. ಖರ್ಗೆ ಅವರು, ನಾನು, ಶ್ರೀನಿವಾಸ ಪ್ರಸಾದ್ ಅವರು ಬಲವಂತವಾಗಿ ಅವರನ್ನು ಲೋಕಸಭೆಗೆ ಕಳುಹಿಸಿದ್ದೆವು.
ಈ ಕಟ್ಟದ ಕೆಳಭಾಗದಲ್ಲಿ ಅವರ ಕಚೇರಿ ಇದೆ. ಮೇಲೆ ಅವರ ಫೋಟೋ ಇಟ್ಟು ಶ್ರದ್ದಾಂಜಲಿ ಸಭೆ ಮಾಡುತ್ತಿರುವುದನ್ನು ನಂಬಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಂಜನಗೂಡಿನ ಭಾರತ ಜೋಡೋ ಯಾತ್ರೆ ಸಮಯದಲ್ಲಿ ಅವರು ಬದನಾಳುವಿನಲ್ಲಿ ಸರ್ಣಿಯರು ಹಾಗೂ ದಲಿತರ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಬಗೆಹರಿಸುವಂತೆ ರಾಹುಲ್ ಗಾಂಧಿಗೆ ಸಲಹೆ ಕೊಟ್ಟರು. ಅವರ ಸಲಹೆಯಂತೆ ಎರಡು ಸಮುದಾಯದವರನ್ನು ಕರೆಸಿ ಮನಸ್ಥಾಪ ದೂರ ಮಾಡಿ ಎರಡು ಸಮುದಾಯದವರನ್ನು ಒಟ್ಟಾಗಿ ಕೂರಿಸಿ ಊಟ ಮಾಡಿ, ಎರಡೂ ಕೇರಿಗಳ ಮಧ್ಯೆ ಇದ್ದ ರಸ್ತೆ ಮರುಸ್ಥಾಪಿಸಲಾಯಿತು.
ಇಂದು ಮಧ್ಯಾಹ್ನ 2ಗಂಟೆಯಿಂದ ಸಂಜೆ 5ಗಂಟೆವರೆಗೂ ಅವರ ಪಾರ್ಥೀವ ಶರೀರವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇರಿಸಲಾಗುವುದು.
ಭಗವಂತ ನನ್ನ ಸಹೋದರನಾಗಿದ್ದ ಧೃವನಾರಾಯಣ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅವರ ಪಕ್ಷಾತೀತವಾಗಿ ಇರುವ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆ ನೋವು ಭರಿಸುವ ಶಕ್ತಿ ನೀಡಲಿ.’
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ