Latest

ಕೆರೆ ತುಂಬಿಸುವ ಯೋಜನೆ: ರೈತರ ನೆರವಿಗೆ ಧಾವಿಸಿದ ದಿಲೀಪ್ ಕುಮಾರ

 ಪ್ರಗತಿವಾಹಿನಿ ಸುದ್ದಿ, ಗುಬ್ಬಿ – ನನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನು  ವ್ಯಕ್ತಿಯೊಬ್ಬರು ಸ್ವಂತ ಹಣ ಭರಿಸಿ ಮುಂದುವರಿಸುವ ಮೂಲಕ ರೈತರ ನೆರವಿಗೆ ಧಾವಿಸಿದ ಅಪರೂಪದ ವಿದ್ಯಮಾನ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.

ಗುಬ್ಬಿ ತಾಲೂಕಿನ ಅಮ್ಮನಘಟ್ಟ ದೊಡ್ಡ ಕೆರೆ ಹಾಗೂ ಚಿಕ್ಕ ಕೆರೆಗೆ ಹೇಮಾವತಿ ನದಿಯಿಂದ ನೀರು ಪೂರೈಸುವ ಯೋಜನೆ ಮಂಜೂರಾಗಿತ್ತು. ಆದರೆ ದೊಡ್ಡ ಕೆರೆಗೆ ನೀರು ತುಂಬಿ, ಚಿಕ್ಕ ಕೆರೆ ಪೈಪ್ ಅಳವಡಿಕೆಯಾಗುವುದು ತೀರಾ ವಿಳಂಬವಾಗುತ್ತದೆ ಎನ್ನುವ ಕಾರಣಕ್ಕಾಗಿ ರೈತರೇ ಹಣ ಹಂಚಿಕೆ ಮಾಡಿ ಪೈಪ್ ಅಳವಡಿಸುವ ಕಾಮಗಾರಿ ಆರಂಭಿಸಿದ್ದರು. ಆದರೆ ಆ ಹಣ ಸಾಕಾಗಿರಲಿಲ್ಲ. ಹಾಗಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ಜೊತೆಗೆ ಈ ಪೈಪ್ ಲೈನ್ ಮಾರ್ಗದಲ್ಲಿ ರೈತರ ಜೀಮಾನು ಬರುವುದರಿಂದ ಅವರಿಗೆ ಸರಕಾರದಿಂದ ಪರಿಹಾರವೂ ಸಿಗಬೇಕಿತ್ತು. ಅದು ಸಹ ವಿಳಂಬವಾಗಿತ್ತು. ಹಾಗಾಗಿ ಆ ರೈತರು ಸಹ ಕಾಮಗಾರಿಗೆ ಒಪ್ಪಿಗೆ ನೀಡಿರಲಿಲ್ಲ.

ಇದೀಗ ಬಿಜೆಪಿ ಮುಖಂಡ, ಸಾಮಾಜಿಕ ಮುಂದಾಳು ಎಸ್.ಡಿ. ದಿಲೀಪ್ ಕುಮಾರ 9 ರೈತರೊಂದಿಗೆ ಮಾತುಕತೆ ನಡೆಸಿ, ಸರಕಾರದಿಂದ ಆದಷ್ಟು ಶೀಘ್ರ ಪರಿಹಾರ ಮಂಜೂರು ಮಾಡಿಸುವ ಭರವಸೆ ನೀಡಿ ಆ 9 ರೈತರ ಮನವೊಲಿಸಿದರು. ಜೊತೆಗೆ ತಮ್ಮ ಸ್ವಂತ ಕಿಸೆಯಿಂದ ಸುಮಾರು ಒಂದೂವರೆ ಲಕ್ಷ ರೂ ಭರಿಸಿ 25 ಪೈಪ್ ಗಳನ್ನು ತರಿಸಿಕೊಟ್ಟಿದ್ದಾರೆ.

ಇಷ್ಟೇ ಅಲ್ಲ, ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ತೆರಳಿದ ದಿಲೀಪ್ ಕುಮಾರ್, ಸ್ವತಃ ತಾವೇ ಮುಂದೆ ನಿಂತು  ಕೆಲಸ ಪುನಾರಂಭವಾಗುವಂತೆ ನೋಡಿಕೊಂಡಿದ್ದಾರೆ. ರೈತರೇ ಕಾಮಗಾರಿಯನ್ನು ಮುಂದುವರಿಸಿದ್ದಾರೆ. ಡಿಸೆಂಬರ್ ಹೊತ್ತಿಗೆ ಚಿಕ್ಕ ಕೆರೆಗೆ ನೀರು ಹರಿಸಬೇಕೆನ್ನುವುದು ದಿಲೀಪ್ ಕುಮಾರ ಅವರ ಕನಸು. ಯೋಜನೆ ಸಾಕಾರಗೊಂಡರೆ 4 ಗ್ರಾಮಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ.

“ಗ್ರಾಮದ ಎರಡೂ ಕೆರೆ ತುಂಬಿಸಬೇಕೆನ್ನುವುದು ನನ್ನ ಉದ್ದೇಶ. ಇದೊಂದು ಸಮಾಜ ಸೇವೆ ಎಂದು ಮಾಡಿದ್ದೇನೆ. ಜನರಿಗೆ ಅನುಕೂಲವಾದರೆ, ಅವರ ಮುಖದಲ್ಲಿ ನಗು ಕಾಣಿಸಿದರೆ ನನಗೆ ಅದೇ ಖುಷಿ” ಎಂದು ದಿಲೀಪ್ ಕುಮಾರ ಹೇಳುತ್ತಾರೆ.

 

ರೈತರ ಕಣ್ಣೀರು ಒರೆಸುವ ದಿಲೀಪ್ ಕುಮಾರ್ ಕನಸಿಗೆ ನೀರೆರೆದ ಸಚಿವರು

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button