ಇಂತವರೆಲ್ಲ ಒಳಗಡೆ ಇದ್ದಿದ್ರೆ ದೊಡ್ಡ ಅನಾಹುತ ಆಗ್ತಿತ್ತು – ರಮೇಶ ಜಾರಕಿಹೊಳಿ ಕುರಿತು ಡಿ.ಕೆ.ಶಿವಕುಮಾರ ಆಕ್ರೋಶ

ವಿರೋಧಿ ಅಭ್ಯರ್ಥಿಗಳಿಗೆ ಮತ ಹಾಕುವುದನ್ನು ತಡೆಯಲು ವಿಶೇಷ ಜಾಗೃತದಳ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ” ಎಲ್ಲಾ ಕಾಂಗ್ರೆಸ್ ಮುಖಂಡರ ಒಮ್ಮತದಿಂದ ಚನ್ನರಾಜ ಹಟ್ಟಿಹೊಳಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಅವರ ಗೆಲುವಿಗೆ ಶ್ರಮಿಸೋಣ ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಕೊಳೆ ನಮ್ಮಿಂದ ದೂರ ಹೊಯ್ತು
ಬಿಜೆಪಿಯವರೂ ಸಿಂಗಲ್ ಅಭ್ಯರ್ಥಿ ಹಾಕಿದ್ದಾರೆ. ನಾವೂ ಸಿಂಗಲ್ ಅಭ್ಯರ್ಥಿ ಹಾಕಿದ್ದೇವೆ. ಆದರೆ ಬಿಜೆಪಿಯ ಇಬ್ಬರು ಶಾಸಕರು ಪಕ್ಷೇತರರ ಪರವಾಗಿ ನಿಂತು ಚುನಾವಣೆ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಶಿಸ್ತಿನ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತದೆ. ಇಂತವರನ್ನು ಪಕ್ಷದಲ್ಲಿ ಶಿಸ್ತು ಇಟ್ಗೋಬೇಕೊ ಬೇಡ್ವೋ ಎನ್ನುವುದನ್ನು ಅವರು ನಿರ್ಧರಿಸಲಿ ಎಂದು ಡಿಕೆ.ಶಿವಕುಮಾರ ಹೇಳಿದರು.
ಕೊಳೆ ನಮ್ಮಿಂದ ದೂರ ಹೊಯ್ತು. ಇಂತವರೆಲ್ಲ ಒಳಗಡೆ ಇದ್ದಿದ್ರೆ ದೊಡ್ಡ ಅನಾಹುತ ಆಗ್ತಿತ್ತು. ಪಕ್ಷವನ್ನು ಬಲಿಷ್ಟವಾಗಿಸಲು ಈಗ ಅವಕಾಶ ಸಿಕ್ಕಿದೆ ಎಂದೂ ಅವರು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಿದ್ದಿರುವ ಮತ ದೊಡ್ಡ ಸಂದೇಶ ನೀಡಿದೆ. ಅಧಿಕಾರ, ಆಡಳಿತ ಯಾವುದೂ ಇಲ್ಲದಿದ್ದರೂ ದೊಡ್ಡ ಪ್ರಮಾಣದಲ್ಲಿ ಮತ ಪಡೆದಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಕ್ಷೇತ್ರದಲ್ಲಿ ನಮ್ಮದೊಂದು ಟೀಮ್ ಸರ್ವೇ ಮಾಡ್ತಾ ಇದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಇದೆ. ಬಿಜೆಪಿಯ ಮುಖಂಡರಿಗೆ ರಾಜು ಕಾಗೆ ಅವರನ್ನೆಲ್ಲ ಭೇಟಿಯಾಗಲು ಏಕೆ ಅವಕಾಶ ಮಾಡಿಕೊಡ್ತಾ ಇದ್ದೀರಿ. ನಮ್ಮ ಯಾವುದೇ ಕಾರ್ಯಕರ್ತರು ಹೋಗಿ ಅವರನ್ನು ಭೇಟಿಯಾಗುವುದು ಬೇಡ. ಈಗಾಗಲೆ ಅರಬಾವಿಯಲ್ಲಿ ಮತದಾರರಿಗೆ ತಲಾ 10 ಸಾವಿರ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ ಎಂದು ಶಿವಕುಮಾರ ಹೇಳಿದರು.
3- 4 ವಿಧಾನಸಭಾ ಕ್ಷೇತ್ರದಲ್ಲಿ ನಾವೇ ಮತ ಒತ್ತುತ್ತೇವೆ ಎನ್ನುತ್ತಿದ್ದಾರೆ. ಸತೀಶ್ ಜಾರಕಿಹೊಳಿ ತಾವೇ ಬೂತ್ ಏಜಂಟ್ ಆಗುತ್ತೇನೆ ಎನ್ನುವ ಮೂಲಕ ಒಳ್ಳೆಯ ಸಂದೇಶ ರವಾನಿಸಿದ್ದಾರೆ. ಎಲ್ಲರೂ ಸ್ವಾಗತಿಸಿದ್ದಾರೆ. ನಮ್ಮ ಸರ್ವೆ ಟೀಮ್ ಬಿಜೆಪಿ ಜೊತೆಗೂ ಇದೆ. ಅಲ್ಲಿಂದಲೂ ಮಾಹಿತಿ ಪಡೆಯುತ್ತಿದ್ದೇವೆ. ದೊಡ್ಡ ಸಾಹುಕಾರ ದೊಡ್ಡ ಸಾಹುಕಾರ ಎನ್ನುತ್ತಾರೆ, ಯಾವ ಸಾಹುಕಾರ? ನಮ್ಮ ಆದ್ಯತೆ ಮೊದಲು ಚುನಾವಣೆ. ನಮ್ಮ ಕಾರ್ಯಕರ್ತರು ಯಾರನ್ನೂ ಭೇಟಿ ಮಾಡೋದು ಬೇಡ. ನಮ್ಮ ಓಟನ್ನು ಕಾಪಾಡಿಕೊಳ್ಳೋಣ ಎಂದರು.
ಬಿಜೆಪಿಗೂ ದೊಡ್ಡ ಪ್ರಾಣ ಸಂಕಟವಾಗಿದೆ. ಈ ಬಾರಿ ಅವರು ದುಷ್ಟ ರಾಜಕಾರಣಕ್ಕೆ ತೆರೆ ಎಳಿತಾರೆ ಅಂದ್ಕೊಂಡಿದ್ದೇನೆ. ಅವರಿಗೂ ಇಂತವರಿಂದ ಸಾಕಾಗಿದೆ. ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಆ ಪಾರ್ಟಿಯಿಂದ ನಮ್ಮ ಪಾರ್ಟಿಗೂ ದೊಡ್ಡ ಸಂಖ್ಯೆಯಲ್ಲಿ ಬರುವವರಿದ್ದಾರೆ. ಅದನ್ನೆಲ್ಲ ಮುಂದೆ ನೋಡೋಣ ಎಂದು ಅವರು ಹೇಳಿದರು.
ನಮ್ಮ ಓಟು ನಮಗಷ್ಟೆ. ಬೇರೆ ಚಿಂತೆ ಬೇಡ. ಬಿಜೆಪಿ ವೀಕ್ ಆಗಿರೋದ್ರಿಂದ್ ದಳದವರ ಜೊತೆ ಮಾತಾಡ್ತಾ ಇದಾರೆ ಎಂದು ಛೇಡಿಸಿದರು.
ಪ್ರತಿ ಬೂತ್ ನಲ್ಲೂ ವೀಡಿಯೋ ರೆಕಾರ್ಡ್ ಮಾಡಬೇಕು. ಯಾರದ್ದೋ ಓಟು ಯಾರೋ ಹಾಕುವುದು ಬೇಡ. ಎಲೆಕ್ಷನ್ ಕಮಿಶನ್ ಗೆ ರಾಜ್ಯ, ರಾಷ್ಟ್ರದಲ್ಲಿ ಕೂಡ ಕಂಪ್ಲೇಂಟ್ ಮಾಡ್ತಾ ಇದ್ದೇನೆ. ಸಾಮೂಹಿಕ ನಾಯಕತ್ವದಲ್ಲಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಬೆಳಗಾವಿಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಹಾಕಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಶಿವಕುಮಾರ ತಿಳಿಸಿದರು.
ಎಐಸಿಸಿಯಿಂದ ಕೂಡ ವೀಕ್ಷಕರು ಬರಲಿದ್ದಾರೆ. 5ನೇ ತಾರೀಖು ಸಿದ್ದರಾಮಯ್ಯ ಮತ್ತು ನಾನು ಬಂದು ದೊಡ್ಡ ಸಂದೇಶ ಕೊಡುತ್ತೇವೆ. ನಮ್ಮ ಕಾರ್ಯಕರ್ತರು ಯಾರ ಗಾಡಿಯನ್ನೂ ಹತ್ತಲು ಹೋಗಬೇಡಿ. ಬಂಡುಕೋರರಿಗೆ ಮತ ಹಾಕಬೇಡಿ ಎಂದು ವಿನಂತಿಸಿದರು.
ಚುನಾವಣೆಯ ಬೆಳಗಾವಿ ಉಸ್ತುವಾರಿ ಎನ್.ಎ.ಹ್ಯಾರೀಸ್ ಮಾತನಾಡಿ, ಬೆಳಗಾವಿಯ ಎಲ್ಲ ಮುಖಂಡರು, ಕಾರ್ಯಕರ್ತರ ಜೊತೆ ನನಗೆ ಉತ್ತಮ ಸಂಬಂಧವಿದೆ. ಎಲ್ಲರ ಜೊತೆ ಸೇರಿ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರು.
ಚನ್ನರಾಜ್ ಹಟ್ಟಿಹೊಳಿ ಬಹುಮತ ಅಂತರದಿಂದ ವಿಜಯಶಾಲಿಯಾಗಲು ಪ್ರಯತ್ನಿಸಿ: ಸತೀಶ ಜಾರಕಿಹೊಳಿ

ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ನನಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ನಿಂದ ಯುವಕರಿಗೆ ಒಳ್ಳೆಯ ಸಂದೇಶ ನೀಡಲಾಗಿದೆ. ನಾನು ಚಿಕ್ಕವನು. ತಪ್ಪು ಮಾಡಿದರೆ ಕೈ ಹಿಡಿದು ತಿದ್ದಿ. ಒಳ್ಳೆಯ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ. ನಿಮ್ಮೆಲ್ಲರ ಆಶಿರ್ವಾದ ಇರಲಿ ಎಂದು ವಿನಂತಿಸಿದರು.
ನನ್ನನ್ನು ಅಧಿಕೃತ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ ಪಕ್ಷದ ರಾಷ್ಟ್ರೀಯ ನಾಕರಿಗೆ, ರಾಜ್ಯದ ನಾಯಕರಿಗೆ ಹಾಗೂ ಜಿಲ್ಲೆಯ ಎಲ್ಲ ನಾಯಕರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಚನ್ನರಾಜ ತಿಳಿಸಿದರು.
ಬೆಳಗಾವಿ ಕ್ಷೇತ್ರದಲ್ಲಿ 8,875 ಮತದಾರರಿದ್ದಾರೆ. ಇವರಲ್ಲಿ 4600ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಮಹಿಳೆಯರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ ನ ರಾಜೀವ ಗಾಂಧಿ ಸರಕಾರ. ಕಾಂಗ್ರೆಸ್ ವಿಕೇಂದ್ರಕರಣ ವ್ಯವಸ್ಥೆಯ ಬಲವರ್ಧನೆ ಮಾಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಸಿಗುವಂತೆ ಮಾಡಿದೆ ಎಂದು ಚನ್ನರಾಜ ತಿಳಿಸಿದರು.
ಶಾಸಕರಾದ ಮಹಾತೇಂಶ ಕೌಜಲಗಿ, ಎನ್ಎ ಹ್ಯಾರೀಸ್, ಲಕ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಎ.ಎನ್. ಹ್ಯಾರಿಶ್, ಮಾಜಿ ಸಚಿವ ವೀರಕುಮಾರ್ ಪಾಟೀಲ್ , ಡಿಬಿ ಇನಾಮರಾದ್ ಮಾಜಿ ಶಾಸಕರಾದ ಕಾಕಾಸಾಹೇಬ್ ಪಾಟೀಲ್ , ಪೀರೋಜ್ ಸೇಠ , ಶಾಹಾಜಾನ್ ಡೋಂಗರಗಾವ್ ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ವಿಶ್ವಾಸ ವೈದ್ಯ, ಅರವಿಂದ ದಳವಾಯಿ, ಗಜಾನನ ಮಂಗಸೂಳಿ, ಎಸ್ .ಬಿ.ಘಾಟಗೆ, ಮಹಾವೀರ ಮೋಹಿತೆ, ರಾಜು ಸೇಠ, ವಿನಯ ನಾವಲಗಟ್ಟಿ, ಲಕ್ಷಣರಾವ್ ಚಿಂಗಳೆ ಹಾಗೂ ಇತರರು ಇದ್ದರು.
ಬ್ಲಾಕ್ ಮೇಲರ್ ಗಳಿಗೆ ಹೆದರುವ ಪಕ್ಷ ಎನ್ನುವುದಾದರೆ ಅವರ ಇಚ್ಛೆಗೆ ಬಂದಂತೆ ಮಾಡಲಿ
ಇದಕ್ಕೂ ಮೊದಲು ಪತ್ರಕರ್ತರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ, ಇಲ್ಲಿ ಬಹಳ ಒಳ್ಳೆಯ ವಾತಾವರಣ ಇದೆ. ಮಳೆ, ಬೆಳೆ ಎಲ್ಲವೂ ಚೆನ್ನಾಗಿ ಆಗುತ್ತಿದ್ದು, ರಾಜಕೀಯದಲ್ಲೂ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇವೆ. ಕಳೆದ ಬಾರಿಗಿಂತ ಹೆಚ್ಚಿನ ಸೀಟು ಗೆಲ್ಲುವ ವಿಶ್ವಾಸ ಇದೆ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾತ್ರ ಈ ಚುನಾವಣೆ. ನಾವು ಗ್ರಾಮ ಪಂಚಾಯಿತಿಗೆ ಹೆಚ್ಚಿನ ಒತ್ತು ನೀಡಿದ್ದು, ಜೆ.ಹೆಚ್ ಪಟೇಲರ ಕಾಲದಲ್ಲಿದ್ದ 1 ಲಕ್ಷ ರುಪಾಯಿ ಅನುದಾನವನ್ನು ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ 5 ಲಕ್ಷಕ್ಕೆ ಹೆಚ್ಚಿಸಿ ನಾವು ಗ್ರಾಮ ಪಂಚಾಯಿತಿಗೆ ಶಕ್ತಿ ತುಂಬಿದೆವು ಎಂದರು.
ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ಪಂಚಾಯಿತಿಗೆ ಒಂದರಿಂದ ಎರಡು ಕೋಟಿ ರುಪಾಯಿವರೆಗೂ ಖರ್ಚು ಮಾಡುವ ಅವಕಾಶ ನರೇಗಾದಿಂದ ಬಂದಿದೆ. ಗ್ರಾಮ ಪಂಚಾಯಿತಿ ಸದಸ್ಯರು ಜನರ ಸೇವೆ ಮಾಡಲು ಶಕ್ತಿ ಇದೆ ಎಂದರೆ ಅದು ಕಾಂಗ್ರೆಸ್ ನ ನರೇಗಾ ಕಾರ್ಯಕ್ರಮದಿಂದ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರಾಜೀವ್ ಗಾಂಧಿ ಅವರು ಸಂವಿಧಾನ ತಿದ್ದುಪಡಿ ತಂದು ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ತಂದರು. ಇದೆಲ್ಲವೂ ಕಾಂಗ್ರೆಸ್ ಕಾರ್ಯಕ್ರಮ ಎಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಅರಿವಾಗಿದೆ. ಅವರೆಲ್ಲ ಪ್ರಜ್ಞಾವಂತರಿದ್ದು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಪ್ರಯೋಜನವಾಗಿಲ್ಲ ಎಂದು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ ಎಂದು ಶಿವಕುಮಾರ ಹೇಳಿದರು.
ಈ ಚುನಾವಣೆ ಮುಂದಿನ ವಿಧಾನಸಭೆಗೆ ದಿಕ್ಸೂಚಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಬಿಜೆಪಿ ಪಕ್ಷದವರೇ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಯಡಿಯೂರಪ್ಪನವರು ಜನತಾದಳದ ಬೆಂಬಲ ಕೇಳಿದ್ದು, ಬೊಮ್ಮಾಯಿ ಅವರೂ ಕೇಳುತ್ತಿದ್ದಾರೆ ಎಂಬ ಸುದ್ದಿ ನೋಡಿದ್ದೇನೆ. ಈಗ ಬಿಜೆಪಿಯವರು ಬೆಂಬಲ ಕೇಳಿದ್ದಾರೆ ಎಂದರೆ ಅವರ ಶಕ್ತಿ ಏನು? ಎಷ್ಟು ಕುಂದಿದೆ? ಜನತಾದಳದ ಬಗ್ಗೆ ಅರುಣ್ ಸಿಂಗ್ ಹೇಳಿಕೆ ಕೊಟ್ಟ ಮೇಲೆ, ಯಡಿಯೂರಪ್ಪನವರು ಬೆಂಬಲ ಕೇಳಿದ್ದಾರೆ ಎಂದರೆ ಮುಳುಗುತ್ತಿರುವವರು ಯಾರು? ಎಂದು ಜನರೇ ತೀರ್ಮಾನಿಸಲಿ. ಬಿಜೆಪಿಯವರು ಬಲಿಷ್ಠವಾಗಿದ್ದರೆ ಬೇರೆಯವರ ಬೆಂಬಲ ಯಾಕೆ ಕೇಳುತ್ತಿದ್ದರು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಮ್ಮ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ನಾವು ಏನು ಮಾಡಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅವರವರ ಶಕ್ತಿಗೆ ಅನುಗುಣವಾಗಿ ಅವರು ಆತ್ಮವಿಶ್ವಾಸದಲ್ಲಿ ಚುನಾವಣೆ ಎದುರಿಸಬೇಕು’ ಎಂದರು.
ಸೋಮಣ್ಣನವರು ಪತ್ರಿಕಾಗೋಷ್ಠಿ ನಡೆಸಿ ಕೆಜಿಎಫ್ ಬಾಬು ಅವರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನೂರಾರು ಅಭ್ಯರ್ಥಿಗಳು ನೂರಾರು ವ್ಯವಹಾರ ಇಟ್ಟುಕೊಂಡಿರುತ್ತಾರೆ. ಅವರು ದಾಖಲೆ ಬಿಡುಗಡೆ ಮಾಡಲಿ. ಯಾವ ಅಭ್ಯರ್ಥಿ ಬಗ್ಗೆ ಏನು ಅಂತಾ ಹೇಳಲಿ?’ ಆಮೇಲೆ ನೋಡೋಣ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಸೋಲಿಸುತ್ತೇವೆ ಎಂಬ ರಮೇಶ್ ಜಾರಕಿಹೊಳಿ ಅವರ ಆಕ್ರೋಶದ ಮಾತಿನ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಸ್ವಾಭಿಮಾನ ಇದ್ದರೆ, ಅವರಲ್ಲಿ ಶಿಸ್ತು ಇದ್ದರೆ ಅವರು ಉತ್ತರ ನೀಡಲಿ. ಬಿಜೆಪಿಯಲ್ಲಿ ಶಿಸ್ತು ಇಲ್ಲ, ಇದು ಬ್ಲಾಕ್ ಮೇಲರ್ ಗಳಿಗೆ ಹೆದರುವ ಪಕ್ಷ ಎನ್ನುವುದಾದರೆ ಅವರ ಇಚ್ಛೆಗೆ ಬಂದಂತೆ ಮಾಡಲಿ. ಎಲ್ಲವನ್ನು ಜನ ನೋಡುತ್ತಿದ್ದಾರೆ. ಬಿಜೆಪಿ ಹೆದರಿ ಸರ್ಕಾರ ನಡೆಸುವ ಮಟ್ಟಕ್ಕೆ ಬಂದಿರುವುದು ಬಹಳ ಸಂತೋಷದ ಬೆಳವಣಿಗೆ. ನಮ್ಮ ಪಕ್ಷದಲ್ಲಿ ಈ ರೀತಿ ಮಾಡಿದ್ದರೆ ಒಂದು ಗಂಟೆಯೂ ಪಕ್ಷದಲ್ಲಿ ಇಟ್ಟುಕೊಳ್ಳದೆ ಅವರನ್ನು ವಜಾ ಮಾಡುತ್ತಿದ್ದೆ’ ಎಂದರು.
ಮಹಿಳಾ ಶಾಸಕಿ ವಿರುದ್ಧ ರಮೇಶ್ ಜಾರಕಿಹೊಳಿ ಅವರ ಹಗುರವಾದ ಮಾತುಗಳ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಮಹಿಳಾ ಶಾಸಕಿ ವಿರುದ್ಧ ರಮೇಶ್ ಜಾರಕಿಹೊಳಿ ಅವರು ಆಡಿರುವ ಮಾತುಗಳನ್ನು ಕೆಲ ಮಾಧ್ಯಮಗಳು ಸಂಪೂರ್ಣ ತೋರಿಸಿದರೆ, ಕೆಲವರು ಕಟ್ ಮಾಡಿ ತೋರಿಸಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ಪ್ರತಿಬಿಂಬ. ಬಿಜೆಪಿ ಸಂಸ್ಕಾರ ಇರುವ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಅದಕ್ಕೆ ಶೋಭಕ್ಕನವರು, ಯಡಿಯೂರಪ್ಪನವರು, ಬೊಮ್ಮಾಯಿಯವರು, ಕಟೀಲ್ ಅವರು ಉತ್ತರ ನೀಡಲಿ’ ಎಂದರು.
ಬೆಳಗಾವಿಯಲ್ಲಿ ಮತದಾರರನ್ನು ಬೆದರಿಸಲಾಗುತ್ತಿದೆ ಎಂಬ ಪ್ರಶ್ನೆಗೆ, ‘ನಮ್ಮ ಪಕ್ಷ ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದು, ಗೋಕಾಕ್, ಅರಬಾವಿ, ರಾಯಭಾಗ್ ಹಾಗೂ ಇತರ ಕಡೆಗಳಲ್ಲಿ ಮತದಾರರ ಚೀಟಿ ಪಡೆದು ಬೇರೆಯವರು ಮತ ಹಾಕುವ ಪದ್ಧತಿ ನಡೆದುಕೊಂಡು ಬಂದಿದೆ. ನಮ್ಮ ಜಿಲ್ಲಾ ಘಟಕ, ಅಭ್ಯರ್ಥಿ ಮತ್ತಿತರರು ರಾಜ್ಯ ಮಟ್ಟದ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ವಿಡಿಯೋ ವ್ಯವಸ್ಥೆ ಮಾಡಬೇಕು ಎಂದೂ ಮನವಿ ಮಾಡಿದ್ದೇವೆ. ನಮ್ಮ ಕಾರ್ಯಾಧ್ಯಕ್ಷರು, ಇತರೆ ನಾಯಕರೇ ಬೂತ್ ಏಜೆಂಟರಾಗಿ ಕೂರುತ್ತೇವೆ ಎಂದು ಹೇಳಿದ್ದಾರೆ. ನಮ್ಮ ನಾಯಕರು ಎಲ್ಲಿ ಪ್ರಚಾರ ಮಾಡಬೇಕು ಎಂದು ಹೇಳುತ್ತಾರೋ ಅಲ್ಲಿ ಹೋಗಿ ನಾನು ಪ್ರಚಾರ ಮಾಡುತ್ತೇನೆ’ ಎಂದರು.
ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ‘ಸದ್ಯಕ್ಕೆ ಆ ವಿಚಾರ ಬೇಡ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಗಮನಹರಿಸೋಣ. ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಅವರು ಕೂಡಲೇ ಬೆಂಗಳೂರು ನಗರ, ಬೆಳಗಾವಿ ಸೇರಿದಂತೆ ಎಲ್ಲ ಕಡೆಗಳಲ್ಲಿ ವಿಡಿಯೋ ವ್ಯವಸ್ಥೆ ಮಾಡಿ, ಮತದಾರರೇ ಮತ ಹಾಕುವಂತೆ ನೋಡಿಕೊಳ್ಳಬೇಕು. ಪಾರದರ್ಶಕ ಹಾಗೂ ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸುತ್ತೇವೆ’ ಎಂದರು.
ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಯುವಕರಿದ್ದು, ಸಜ್ಜನರಿದ್ದಾರೆ. ಜನಸೇವೆ ಮಾಡಿಕೊಂಡು ಬಂದಿದ್ದಾರೆ. ಒಂದೇ ಪಕ್ಷದಲ್ಲಿದ್ದು, ನಮ್ಮ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಒಂದು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು ಎಂದರು.
ಬೆಳಗಾವಿ ಅಧಿವೇಶನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎರಡು ವರ್ಷಗಳ ಹಿಂದೆಯೇ ಬೆಳಗಾವಿ ಅಧಿವೇಶನ ನಡೆಯಬೇಕಿತ್ತು. ಅಲ್ಲಿ ಅಧಿವೇಶನ ನಡೆಸದ ಹಿನ್ನೆಲೆಯಲ್ಲಿ ಸುವರ್ಣ ಸೌಧ ಬಾಡಿಗೆಗೆ ನೀಡಿ ಎಂದು ಹೇಳಿದ್ದೆ. ನೆರೆ ಪರಿಹಾರ, ರೈತರಿಗೆ ಬೆಂಬಲ ಬೆಲೆ, ಕೋವಿಡ್ ಸಮಯದಲ್ಲಿ ನೆರವಾಗಿಲ್ಲ, ಕಬ್ಬು ಬೆಳೆಗಾರರಿಗೆ ಹಣ ಕೊಡಿಸಲು ಆಗಿಲ್ಲ. ಜನರ ಆಕ್ರೋಶಕ್ಕೆ ಹೆದರಿ ಇಷ್ಟು ದಿನ ಬೆಳಗಾವಿಯಲ್ಲಿ ಅಧಿವೇಶನ ಮಾಡಿರಲಿಲ್ಲ. ಈಗ ವಿಧಿ ಇಲ್ಲದೇ ಅಧಿವೇಶನ ಮಾಡುತ್ತಿದ್ದಾರೆ’ ಎಂದರು.
ನಾನಾಗಿದ್ರೆ ಒಂದು ಗಂಟೆಯೂ ಉಳಿಸಿಕೊಳ್ತಿರಲಿಲ್ಲ – ಡಿ.ಕೆ.ಶಿವಕುಮಾರ ಕಿಡಿ ಕಿಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ