*ಮಕ್ಕಳಲ್ಲಿ ಉಂಟಾಗುವ ಅಲರ್ಜಿ ಬಗ್ಗೆ ನಿರ್ಲಕ್ಷ ಬೇಡ: ಡಾ. ಮಹಾಂತಶೆಟ್ಟಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಕ್ಕಳಲ್ಲಿ ಉಂಟಾಗುವ ಅಲರ್ಜಿ ಬಗ್ಗೆ ನಿರ್ಲಕ್ಷ ಬೇಡ, ಅದರಿಂದ ಅವರ ಮೇಲೆ ಪರಿಣಾಮ ಬೀರಲಿದೆ. ಇದು ಮರಾಂತಿಕವಾಗಿರಲೂಬಹುದು. ಆದ್ದರಿಂದ ಅಲರ್ಜಿಯನ್ನು ತಡೆಯಲು ಹಾಗೂ ಪರಿಣಾಮಕಾರಿಯಾದ ಚಿಕಿತ್ಸೆ ಕಲ್ಪಿಸಬೇಕು. ಅಲರ್ಜಿ ಖಾಯಿಲೆ ಗುಣಮುಖಗೊಳಿಸುವದು ಸವಾಲಾಗಿ ಪರಿಣಮಿಸಿದೆ ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರಿಂದಿಲ್ಲಿ ಹೇಳಿದರು.
ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಇಎನ್ ಟಿ ವಿಭಾಗವು ದಿ. 8 ಜುಲೈ 2024 ರಂದು ಏರ್ಪಡಿಸಿದ್ದ “ಇಂಟಿಗ್ರೆಟೆಡ್ ಅಪ್ರೋಚ್ ಟು ದಿ ಮ್ಯಾನೆಜಮೆಂಟ ಆಫ್ ಅಲರ್ಜಿಕ್ ರೈನಿಟಿಸ್ ಕುರಿತು ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಲರ್ಜಿ ಎನ್ನುವದು ದೀರ್ಘಕಾಲಿನ ಖಾಯಿಲೆ, ಸಂಶೋಧನೆ, ನೂತನ ಔಷಧಗಳು ಸಾಕಷ್ಟಿದ್ದರೂ ಕೂಡ ಗುಣಮುಖಗೊಳಿಸುವದು ಸವಾಲಾಗಿದೆ. ಆದ್ದರಿಂದ ಡ್ರಗ್ಸ ಕುರಿತು ಕಾಳಜಿ ವಹಿಸುತ್ತ ಕೇವಲ ಅಲೋಪತಿ ಮಾತ್ರವಲ್ಲದೇ ಪರ್ಯಾಯ ಔಷಧಿಗಳಾದ ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆಯ ಮೊರೆ ಹೋಗಬೇಕಾಗುತ್ತದೆ. ಆದರೂ ಕೂಡ ಅಲೋಪಥಿಯಲ್ಲಿ ವಿವಿಧ ಔಷಧಿಗಳು ಲಭ್ಯವಿವೆ. ಇವುಗಳನ್ನು ಸರಿಯಾಗಿ ಬಳಸಿ ರೋಗಿಯನ್ನು ಆರೈಕೆ ಮಾಡಬೇಕೆಂದು ಕರೆ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಖಾಯಿಲೆಗಳು ಬಂದೆರಗುತ್ತಿದ್ದು, ಎಲ್ಲವನ್ನು ಅಲೋಪಥಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಪರ್ಯಾಯ ಮಾರ್ಗಗಳು ಅವಶ್ಯ. ರೋಗಿಗಳು ಬೇಕಾದಲ್ಲಿ ಚಿಕಿತ್ಸೆ ಪಡೆಯಬಹುದು. ದೀರ್ಘಕಾಲಿನ ಖಾಯಿಲೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಲು ಸಂಶೋಧನಾ ಕಾರ್ಯ ಕೈಕೊಳ್ಳಬೇಕು. ಸಂಶೋಧನೆಗೆ ಸಾಕಷ್ಟು ಹಣವಿದ್ದು, ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿ, ಸಮಾಜವನ್ನು ಆರೋಗ್ಯವಾಗಿಡಲು ಮುಂದಾಗಬೇಕೆಂದು ತಿಳಿಸಿದರು.
ಇಎನ್ ಟಿ ವಿಭಾಗ ಮುಖ್ಯಸ್ಥರಾದ ಡಾ. ರಾಜೇಂದ್ರ ಮೆಟಗುಡ್ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಎನ್ ಡಿ ಜಿಂಗಾಡೆ, ಡಾ. ಮುಕುಂದ ಉಡಚನಕರ ಹಾಗೂ ಡಾ. ಸವಿತಾ ಅಂಗಡಿ ಅವರು ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಡಾ. ರಾಜೇಶ ಪವಾರ, ಡಾ. ವಿ ಎಮ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ ಉಪಸ್ಥಿತರಿದ್ದರು. ಡಾ. ನಿತಿನ ಅಂಕಲೆ ಹಾಗೂ ಡಾ. ಪ್ರಶಾಂತ ಪಾಟೀಲ ವಂದಿಸಿದರು. ಡಾ. ಶಮಾ ಬೆಲ್ಲದ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ