
ಪ್ರಗತಿವಾಹಿನಿ ಸುದ್ದಿ: ಜಪಾನ್‌ನಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್ ಹಿನ್ನೆಲೆಯಲ್ಲಿ ಭಾರತ ಪುರುಷರ ಕಬಡ್ಡಿ ತಂಡವನ್ನು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರು, ಫಿಭಾ ಏಷ್ಯಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜ್ ಅವರು ಸೋಮವಾರ ಭೇಟಿ ಮಾಡಿ, ಆಟಗಾರರಿಗೆ ಶುಭಕೋರಿದರು.
ಭಾರತ ತಂಡದ ಆಟಗಾರರನ್ನು ಭೇಟಿ ಮಾಡಿದ ಡಾ. ಗೋವಿಂದರಾಜ್ ಅವರು, ಏಷ್ಯನ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಆಟಗಾರರೊಂದಿಗೆ ಕೆಲಕಾಲ ಸಂವಾದ ನಡೆಸಿದರು. ತಂಡದ ಸಿದ್ಧತೆ, ಪಂದ್ಯಾವಳಿಯಲ್ಲಿನ ನಿರೀಕ್ಷೆಗಳು ಹಾಗೂ ಕಬಡ್ಡಿ ಕ್ರೀಡೆಯ ಬೆಳವಣಿಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಭಾರತದಲ್ಲಿ ಕಬಡ್ಡಿಗೆ ಅಪಾರ ಜನಪ್ರಿಯತೆ ಇದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡದ ಸಾಧನೆಗಳು ದೇಶದ ಕ್ರೀಡಾಪಟುಗಳಿಗೆ ಮತ್ತಷ್ಟು ಸ್ಫೂರ್ತಿ ನೀಡುತ್ತಿವೆ. ಏಷ್ಯನ್ ಗೇಮ್ಸ್‌ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಡಾ. ಗೋವಿಂದರಾಜ್ ವ್ಯಕ್ತಪಡಿಸಿ, ಆಟಗಾರರು ಸಂಪೂರ್ಣ ಆತ್ಮವಿಶ್ವಾಸದಿಂದ ಕಣಕ್ಕಿಳಿಯುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ತೇಜಸ್ವಿ ಸಿಂಗ್ ಗೆಲ್ಹೋಟ್ ಹಾಗೂ ಭಾರತ ಪುರುಷರ ಕಬಡ್ಡಿ ತಂಡದ ಕೋಚ್, ಕರ್ನಾಟಕದ ಬಿ.ಸಿ. ರಮೇಶ್ ಉಪಸ್ಥಿತರಿದ್ದರು. ತಂಡದ ಕೋಚ್ ಹಾಗೂ ಆಟಗಾರರೊಂದಿಗೆ ಡಾ. ಗೋವಿಂದರಾಜ್ ಅವರು ಕ್ರೀಡಾ ಕ್ಷೇತ್ರದ ಬೆಳವಣಿಗೆ ಮತ್ತು ಕಬಡ್ಡಿ ಕ್ರೀಡೆಯ ಭವಿಷ್ಯದ ಕುರಿತು ಮಾತುಕತೆ ನಡೆಸಿದರು.
ಕರ್ನಾಟಕದ ಬಿ.ಸಿ. ರಮೇಶ್ ಅವರು ಭಾರತ ಪುರುಷರ ಕಬಡ್ಡಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವುದು ರಾಜ್ಯದ ಕ್ರೀಡಾ ಕ್ಷೇತ್ರಕ್ಕೂ ಹೆಮ್ಮೆಯ ಸಂಗತಿಯಾಗಿದ್ದು, ತಂಡದ ಯಶಸ್ಸಿಗೆ ಡಾ. ಗೋವಿಂದರಾಜ್ ಶುಭ ಹಾರೈಸಿದರು.




