ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನಗೆ ಈ ವರೆಗೂ ಯಾವುದೇ ನೋಟೀಸ್ ಕೂಡ ಬಂಧಿಲ್ಲ. ಆದರೆ ನನಗೆ ಕಿಶೋರ್ ಶೆಟ್ಟಿ, ಪ್ರತೀಕ್ ಶೆಟ್ಟಿ ಪರಿಚಯವಿದೆ ಎಂದು ಆಂಕರ್ ಅನುಶ್ರೀ ತಿಳಿಸಿದ್ದಾರೆ.
ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಹೆಸರು ಕೂಡ ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿದ್ದು, ಬಂಧಿತ ಡಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಎಂಬುವವರು ಸಿಸಿಬಿ ವಿಚಾರಣೆ ವೇಳೆ ಅನುಶ್ರೀ ಹೆಸರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ವಾಟ್ಸಪ್ ನೋಟಿಸ್ ನೀಡಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಅನುಶ್ರೀ, ಈ ವರೆಗೆ ನಮ್ಮ ಮನೆಗೆ ಯಾವುದೇ ಅಧಿಕಾರಿಗಳು ಬಂದಿಲ್ಲ, ನನಗೆ ಯಾವುದೇ ನೋಟೀಸ್ ಕೂಡ ನೀಡಿಲ್ಲ. ನನ್ನ ವಾಟ್ಸಪ್ ಗೂ ಯಾವುದೇ ನೋಟೀಸ್ ಬಂದಿಲ್ಲ. ಒಂದು ವೇಳೆ ನೋಟೀಸ್ ಕೊಟ್ಟರೆ ವಿಚಾರಣೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಡಾನ್ಸರ್ ಗಳಾದ ಕಿಶೋರ್ ಶೆಟ್ಟಿ ಹಾಗೂ ತರುಣ್ ಪರಿಚಯವಿದೆ. ಆದರೆ ಅವರ ಯಾವುದೇ ವ್ಯವಹಾರಗಳ ಬಗ್ಗೆ ನನಗೆ ಗೊತ್ತಿಲ್ಲ. ಕಳೆದ 10 ವರ್ಷಗಳ ಹಿಂದೆ ನಡೆದಿದ್ದ ಡಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ನಾನು ವಿನ್ನರ್ ಆಗಿದ್ದೆ. ಆ ವೇಳೆ ನನ್ನ ಡಾನ್ಸ್ ಗೆ ಕೊರಿಯೋಗ್ರಾಫಿ ಮಾಡಿದ್ದು ಕಿಶೋರ್. ಮಂಗಳೂರಿನಲ್ಲಿ ತರುಣ್ ಒಮ್ದು ಡಾನ್ಸ್ ಕ್ಲಾಸ್ ನಡೆಸುತ್ತಿದ್ದು, ಅದರ ಉದ್ಘಾಟನೆಯ ಕಾರ್ಯಕ್ರಮದ ವೇಳೆ ನಾನು ಹೋಗಿದ್ದೆ ಎಂದಿದ್ದಾರೆ.
ಇನ್ನು ಪ್ರತೀಕ್ ಶೆಟ್ಟಿ ಹಾಗೂ ಕಿಶೋರ್ ನಮ್ಮ ಊರಿನವರೇ ಆಗಿದ್ದರಿಂದ ನನಗೆ ಪರಿಚಯವಿದೆ. ಆದರೆ 2-3 ವರ್ಷಗಳಿಂದ ನಾನು ಅವರನ್ನು ಭೇಟಿಯಾಗಿಲ್ಲ. ನನಗೆ ಅವರ ಸಂಪರ್ಕವೂ ಇಲ್ಲ. ಅವರ ಯಾವುದೇ ವ್ಯವಹಾರಗಳ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ