Belagavi NewsBelgaum NewsKannada NewsKarnataka News

*ಸೋಮವಾರ ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ* *ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ*

ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ ಅಧ್ಯಕ್ಷ ಸ್ಥಾನದ ರೇಸಿನಲ್ಲಿ

ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ*: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯು ಸೋಮವಾರ ನಡೆಯಲಿದೆ.

ಈ ಸಂಬಂಧ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ಶನಿವಾರ ರಾತ್ರಿ ನಿರ್ದೇಶಕರ ಸಭೆ ನಡೆಸಿದರು. ನಮ್ಮ ಬಣದವರೇ ಎರಡೂ ಸ್ಥಾನಗಳನ್ನು ಅಲಂಕರಿಸಲಿದ್ದು, ನಮ್ಮವರೇ ಐದು ವರ್ಷ ಅಧಿಕಾರ ನಡೆಸಲಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

Home add -Advt

ಕಳೆದ 19 ರಂದು ಬೆಳಗಾವಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಜಾರಕಿಹೊಳಿ ಬಣದ 11 ಜನರು ಆಯ್ಕೆಯಾಗಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರೊಂದಿಗೆ ಮತ್ತೊಂದು ಸುತ್ತಿನ ಸಭೆಯ ನಂತರ ಅಧ್ಯಕ್ಷ- ಉಪಾಧ್ಯಕ್ಷರ ಹೆಸರುಗಳು ಅಂತಿಮವಾಗಲಿವೆ.

ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕರೆದ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಅಣ್ಣಾಸಾಹೇಬ್ ಜೊಲ್ಲೆ, ವಿಶ್ವಾಸ ವೈದ್ಯ, ಬಾಬಾ ಸಾಹೇಬ್ ಪಾಟೀಲ,  ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ಅಪ್ಪಾಸಾಹೇಬ ಕುಲಗುಡೆ, ಅಮರನಾಥ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ನೀಲಕಂಠ ಕಪ್ಪಲಗುದ್ದಿ, ವಿರುಪಾಕ್ಷ ಮಾಮನಿ ಪಾಲ್ಗೊಂಡಿದ್ದರು.

ತಟಸ್ಥ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಭರಮಗೌಡ ಕಾಗೆ ಮತ್ತು ಗಣೇಶ್ ಹುಕ್ಕೇರಿ ಜಾರಕಿಹೊಳಿ ಬಣವನ್ನು ಬೆಂಬಲಿಸಿದರೆ 13 ಸ್ಥಾನಗಳ ಬೆಂಬಲ ಸಿಕ್ಕಂತಾಗುತ್ತದೆ. 

ಲಿಂಗಾಯತ ಸಮುದಾಯದ ವ್ಯಕ್ತಿಯೊಬ್ಬರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಒಂದು ವೇಳೆ ಚುನಾವಣೆ ನಡೆದರೆ ಸರ್ಕಾರದಿಂದ ನಾಮಕರಣಗೊಂಡಿರುವ ರಾಮದುರ್ಗ ಶಾಸಕ ಅಶೋಕ ಪಟ್ಟಣ, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಮತ್ತು ಬೆಳಗಾವಿ ಉಪ ನಿಬಂಧಕರು ಮತ ಚಲಾಯಿಸುವ ಅಧಿಕಾರವನ್ನು ಹೊಂದಿದ್ದಾರೆ. 

ಸತೀಶ್ ಜಾರಕಿಹೊಳಿಯವರ ಬಣವು ಸಂಪೂರ್ಣ ಬಹುಮತವನ್ನು ಪಡೆದಿದ್ದು, ಈ ಬಣದವರೇ ಅಧ್ಯಕ್ಷ- ಉಪಾಧ್ಯಕ್ಷರಾಗಲಿದ್ದಾರೆ. ಜಾರಕಿಹೊಳಿಯವರ ಬಣದಿಂದ ಅಧ್ಯಕ್ಷ ಗಾದಿಗೆ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ,  ಅಪ್ಪಾಸಾಹೇಬ ಕುಲಗುಡೆ ಅವರ ಹೆಸರುಗಳು ಕೇಳಿ ಬರುತ್ತಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ನೀಲಕಂಠ ಕಪ್ಪಲಗುದ್ದಿ ಮತ್ತು ಅರವಿಂದ ಪಾಟೀಲ್ ‌ಅವರ ಹೆಸರುಗಳು ಕೇಳಿ ಬರುತ್ತಿವೆ.

ನಾಳೆ ಸೋಮವಾರದಂದು ಮುಂಜಾನೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯ ಪ್ರಕ್ರಿಯೆಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 3 ಗಂಟೆ ನಂತರ ಫಲಿತಾಂಶವು ಪ್ರಕಟಗೊಳ್ಳಲಿದೆ.

Related Articles

Back to top button