Kannada NewsKarnataka NewsLatest

ಜನ ಸಾಯುತ್ತಿದ್ದ ಸಂದರ್ಭದಲ್ಲೂ ಬಿಜೆಪಿಯವರು ದುಡ್ಡು ನುಂಗಲು ಯತ್ನಿಸಿದ್ದನ್ನು ಇಡೀ ಕರ್ನಾಟಕ ಕಂಡಿದೆ: ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕೊರೊನಾ ಕಾಲದ ಪಿಪಿಇ ಕಿಟ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇರವಾಗಿ ಭಾಗಿಯಾಗಿದ್ದು, ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದೆ. ನ್ಯಾಯಮೂರ್ತಿ ಡಿಕುನ್ಹಾ ಸಮಿತಿ ಕಳೆದ ಆಗಸ್ಟ್ ತಿಂಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಸುಮಾರು 1700ಕ್ಕೂ ಹೆಚ್ಚು ಪುಟಗಳ ತನಿಖಾ ವರದಿಯನ್ನು ಸಂಪುಟ ಉಪಸಮಿತಿ ಅಧ್ಯಯನ ನಡೆಸುತ್ತಿದೆ. ಅದು ನೀಡುವ ವರದಿಯನ್ನು ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದೆ. ಇದು ನಾವೇ ಬಯಲುಗೊಳಿಸಿರುವ ಹಗರಣ. ಕೊರೊನಾ ಕಾಲದಲ್ಲಿ ಅಸಹಾಯಕ ಜನರ ನೆರವಿಗೆ ಧಾವಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸಬೇಕಾದ ಹೊಣೆ ಸರ್ಕಾರದ್ದಾಗಿತ್ತು. ಆದರೆ ಜನ ಸರಿಯಾಗಿ ಚಿಕಿತ್ಸೆ ಇಲ್ಲದೆ ಸಾಯುತ್ತಿದ್ದ ಸಂದರ್ಭವನ್ನೂ ಬಳಸಿಕೊಂಡು ದುಡ್ಡು ನುಂಗಲು ಯತ್ನಿಸಿದ್ದನ್ನು ಇಡೀ ಕರ್ನಾಟಕ ಕಂಡಿದೆ.

ಕೊರೊನಾ ಕಾಲದಲ್ಲಿ ಬೆಡ್, ಪಿಪಿಇ, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ನಿಂದ ಹಿಡಿದು ಸ್ಯಾನಿಟೈಸರ್ ಮತ್ತು ಮಾಸ್ಕ್ ವರೆಗೆ ಪ್ರತಿಯೊಂದು ಸಾಮಗ್ರಿ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ಆ ಕಾಲದಲ್ಲಿ ನಾವು ಬಯಲಿಗೆಳೆದಿದ್ದೆವು. ಈ ಬಗ್ಗೆ ನಾನು ಸದನದ ಒಳಗೆ ಮತ್ತು ಹೊರಗೆ ಮಾತನಾಡಿದ್ದೆ. ಆದರೆ ಸರ್ಕಾರ ಅವುಗಳನ್ನೆಲ್ಲ ನಿರಾಕರಿಸುತ್ತಲೇ ತನ್ನ ಭ್ರಷ್ಟಾಚಾರದ ದಂಧೆಯನ್ನು ಮುಂದುವರಿಸಿಕೊಂಡು ಹೋಗಿತ್ತು.

ನಮ್ಮ ದೇಶದಲ್ಲಿರುವ ಕಂಪೆನಿಗಳು ಪಿಪಿಇ ಕಿಟ್ ಗಳನ್ನು 200 ರಿಂದ 300 ರೂಪಾಯಿ ದರದಲ್ಲಿ ಮಾರಾಟ ಮಾಡಲು ಸಿದ್ಧ ಇರುವಾಗ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಸೇರಿಕೊಂಡು ಚೀನಾದ ಕಂಪೆನಿಯಿಂದ ರೂ.2,000ಕ್ಕೆ ಒಂದರಂತೆ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಿರುವುದನ್ನು ದಾಖಲೆ ಸಹಿತ ಕೊರೊನಾ ಕಾಲದಲ್ಲಿಯೇ ನಾವು ಹೇಳಿದ್ದೆವು.

ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ತನಿಖಾ ಸಮಿತಿ ನೀಡಿರುವ ವರದಿಯನ್ನು ನಾನಿನ್ನೂ ಪೂರ್ತಿ ಓದಿಲ್ಲ. ನನ್ನ ಪ್ರಕಾರ ಮಾಧ್ಯಮಗಳಲ್ಲಿ ವರದಿಯಾಗಿರುವುದು ಒಂದು ‘‘ಮಂಜುಗಡ್ಡೆಯ ಒಂದು ಸಣ್ಣ ತುದಿ’’ ಮಾತ್ರ. ಒಂದು ಅಂದಾಜಿನ ಪ್ರಕಾರ ಹತ್ತರಿಂದ ಹದಿನೈದು ಸಾವಿರ ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ತನಿಖಾ ಸಮಿತಿ ಆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರಬಹುದು.

ಕೊರೊನಾ ವೈರಸ್ ನಿಂದಾಗಿ ಸಂಭವಿಸಿದ ಸಾವಿನ ಬಗ್ಗೆ ಆಗಿನ ಸರ್ಕಾರ ಕೊಟ್ಟಿರುವ ಸಾವಿನ ಸಂಖ್ಯೆ ಏನೇ ಇರಬಹುದು. ನಮ್ಮ ಪ್ರಕಾರ ರಾಜ್ಯದಲ್ಲಿ ಮಕ್ಕಳು, ಮಹಿಳೆಯರು, ಯುವಜನರು 50,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವಿಗೀಡಾಗಿದ್ದಾರೆ. ರಾಜ್ಯ ಸರ್ಕಾರ ಸಕಾಲದಲ್ಲಿ ಚಿಕಿತ್ಸೆ, ಔಷಧಿ ಮತ್ತು ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟೊಂದು ಸಾವು ಖಂಡಿತ ಸಂಭವಿಸುತ್ತಿರಲಿಲ್ಲ. ಜನ ಕೊರೊನಾ ವೈರಸ್ ಗಿಂತ ಹೆಚ್ಚಾಗಿ ಬಿಜೆಪಿಯ ಭ್ರಷ್ಟಾಚಾರದ ವೈರಸ್ ನಿಂದ ಸತ್ತಿದ್ದಾರೆ. ಈ ಸಾವಿಗೆ 2019 ರಿಂದ 2023ರ ವರೆಗೆ ರಾಜ್ಯದಲ್ಲಿ ಇದ್ದ ಬಿಜೆಪಿ ನೇತೃತ್ವದ ಸರ್ಕಾರವೇ ನೇರ ಹೊಣೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಸಾವನ್ನು ಸಂಭ್ರಮಿಸುವ, ಹೆಣ ಬಿದ್ದಲ್ಲಿ ಓಡಿ ರಾಜಕೀಯದ ಬೇಳೆ ಬೇಯಿಸುವ ಬಿಜೆಪಿ ಮತ್ತು ಅದರ ನೇತೃತ್ವದ ಆಗಿನ ಸರ್ಕಾರ ಕೊರೊನಾ ಕಾಲದಲ್ಲಿಯೂ ಇದೇ ಕೆಲಸ ಮಾಡಿದೆ. ಜನ ಬೆಡ್, ವೆಂಟಿಲೇಟರ್, ಔಷಧಿ, ಪಿಪಿಇ ಕಿಟ್, ವ್ಯಾಕ್ಸಿನ್, ಮಾಸ್ಕ್, ಸ್ಯಾನಿಟೈಸರ್ ಇಲ್ಲದೆ ಸಾಯುತ್ತಿರುವಾಗ ಬಿಜೆಪಿಯವರು ಈ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ದುಡ್ಡು ಹೇಗೆ ಬಾಚಬಹುದು ಎನ್ನುವ ಲೆಕ್ಕದಲ್ಲಿ ತೊಡಗಿದ್ದು ಅತ್ಯಂತ ಅಮಾನವೀಯ ನಡವಳಿಕೆಯಾಗಿದೆ.

ಈ ಯಡಿಯೂರಪ್ಪನವರ ಮಗ ವಿಜಯೇಂದ್ರ ತಾನೊಬ್ಬ ಮಹಾ ಸತ್ಯ ಹರಿಶ್ಚಂದ್ರನ ಮಗನಂತೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಆಡಳಿತದ ಸೂತ್ರ ವಿಜಯೇಂದ್ರನ ಕೈಯಲ್ಲಿಯೇ ಇತ್ತು. ಮುಖ್ಯಮಂತ್ರಿಯವರ ಸಹಿಯನ್ನು ತಾನೇ ಹಾಕುತ್ತಿದ್ದ ಎಂದು ಅವರ ಪಕ್ಷದ ನಾಯಕರೇ ಆರೋಪ ಮಾಡಿದ್ದಾರೆ. ಆದ್ದರಿಂದ ಕೊರೊನಾ ಭ್ರಷ್ಟಾಚಾರದಲ್ಲಿ ಅವರ ಪಾಲೂ ಇದೆ.

ಇನ್ನೊಬ್ಬ ಆರೋಪಿ ಶ್ರೀರಾಮುಲು ರಾಜಕೀಯ ಹುಟ್ಟು ಪಡೆದಿರುವುದೇ ಬಳ್ಳಾರಿಯ ಗಣಿ ಲೂಟಿಯ ಕೆಸರಲ್ಲಿ. ಇವರು ರಿಪಬ್ಲಿಕ್ ಆಫ್ ಬಳ್ಳಾರಿಯ ಗ್ಯಾಂಗ್ ಲೀಡರ್ ಜನಾರ್ಧನ ರೆಡ್ಡಿಯ ಶಿಷ್ಯಬಳಗಕ್ಕೆ ಸೇರಿದವರು. ಇವರಿಗೆ ರಾಜಕೀಯ ಎಂದರೆ ದುಡ್ಡು ನುಂಗುವುದಾಗಿದೆ. ಅದು ಕಬ್ಬಿಣದ ಅದಿರಾಗಬಹುದು ಇಲ್ಲವೇ ಕೊರೊನಾ ರೋಗಿಗಳನ್ನು ಉಳಿಸುವ ಪಿಪಿಇ ಕಿಟ್ ಆಗಿರಬಹುದು. ಅವರಿಗೆ ಜನರ ಪ್ರಾಣ, ಆರೋಗ್ಯ ಮುಖ್ಯ ಅಲ್ಲ, ಹಣ ಬಂದು ಜೇಬಿಗೆ ಬಿದ್ದರೆ ಸಾಕು. ಇಂತಹವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಕೇಳುತ್ತಾ ಅಡ್ಡಾಡುತ್ತಿರುವುದು ನಾಚಿಕೆಗೇಡಿನ ಕೆಲಸವಾಗಿದೆ.

ಡಿಕುನ್ಹಾ ಸಮಿತಿ ವರದಿ ಆಧಾರದಲ್ಲಿ ಕ್ರಮಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಕಾನೂನಿನ ಪ್ರಕ್ರಿಯೆ ಅವಸರದಲ್ಲಿ ನಡೆಯುವಂತಹದ್ದಲ್ಲ. ಅದು ಪೂರ್ಣಗೊಳ್ಳುವವರೆಗೆ ಕೊರೊನಾ ಸಾವಿಗೆ ನೇರ ಹೊಣೆಗಾರರಾಗಿರುವ  ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಹಾಗೂ ಶ್ರೀರಾಮುಲು ಇವರೆಲ್ಲ ತಮ್ಮ ಚುನಾವಣಾ ಪ್ರಚಾರವನ್ನು ತಕ್ಷಣ ನಿಲ್ಲಿಸಿ ಮನೆಗೆ ಹೋಗಬೇಕು. ಮಾನ ಮರ್ಯಾದೆ ಇದ್ದರೆ ತಮ್ಮ ಭ್ರಷ್ಟ ಮುಖವನ್ನು ಹೊತ್ತುಕೊಂಡು ಜನರ ಬಳಿ ಮತಕೇಳಲು ಹೋಗಬಾರದು. ಜನರು ಕೂಡಾ ಇವರ ಸಭೆಗಳನ್ನು ಬಹಿಷ್ಕರಿಸಬೇಕು ಎಂದಿದ್ದಾರೆ.

ಪತ್ರಿಕಾಗೋಷ್ಠಿ-

ಕೋರೋನ ಅವಧಿಯಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಹಗರಣ ನಡೆದಿದೆ, ಆರೋಗ್ಯ ರಕ್ಷಣೆಯ ಸಾಮಗ್ರಿಗಳ ಖರೀದಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಹಿನ್ನೆಲೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ನೇತೃತ್ವದ ಆಯೋಗ ರಚಿಸಲಾಗಿದೆ, ವರದಿ ಇನ್ನೂ ಕೈ ಸೇರಿಲ್ಲ, ಪತ್ರಿಕೆಯಲ್ಲಿ ಓದಿದ್ದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.‌

ತೋರಣಗಲ್ಲು ಪಟ್ಟಣದ JSW ಅತಿಥಿಗೃಹದಲ್ಲಿ ಶನಿವಾರ ಸಂಜೆ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು  ನಡೆಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. 

ಮಾಜಿ ಸಿ.ಎಂ.ಯಡಿಯೂರಪ್ಪ ಅವರು ಇದೆಲ್ಲ ಸುಳ್ಳು ಎನ್ನುತ್ತಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,   ನ್ಯಾಯಾಲಯವಿದೆ.  ಸತ್ಯಾಸತ್ಯತೆ ಬಯಲಾಗಲಿದೆ.‌

ಬಿಜೆಪಿಯವರು ಎಲ್ಲವನ್ನೂ ಸುಳ್ಳು ಅಂತಾರೆ. ಅವರು ಸುಳ್ಳಿನ ಪಿತಾಮಹ, ಯಡಿಯೂರಪ್ಪ ಅವರು ಸಿ.ಎಂ.ಆಗಿದ್ದಾಗ ಕೋವಿಡ್ ಹಗರಣಗಳನ್ನು ನಾನು ವಿರೋಧಪಕ್ಷದ ನಾಯಕನಾಗಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ.  ಆಯೋಗದ ವರದಿ ಬರಲಿ, ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟಿರುವ ದುರ್ಘಟನೆಗಳು ನಡೆದವು.  ಇದನ್ನೂ ಸಚಿವರಾಗಿದ್ದ ಸುಧಾಕರ್ ಅವರು ಸುಳ್ಳು ಸುಳ್ಳು ಎಂದರು.  ನಾನು ಮತ್ತು  ಡಿ.ಕೆ ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಅಲ್ಲಿ ಸಮಸ್ಯೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಲಾಯಿತು ಎಂದರು. 

ಪತ್ರಿಕಾಗೋಷ್ಠಿಯ ಇತರೆ ಮುಖ್ಯಾಂಶಗಳು…

ಸಾಲು ಸಾಲು ಹಗರಣಗಳಲ್ಲಿ ಸಿಲುಕಿದ್ದು, ಶೀಘ್ರದಲ್ಲೇ ಸಿ.ಎಂ.ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಉತ್ತರಿಸಿದ ಅವರು, ನಾನು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವವನು. ನಾನು ಸಣ್ಣ ತಪ್ಪೂ ಮಾಡಿಲ್ಲ, ಮಾಡೋದು ಇಲ್ಲ, ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.‌

ಯತ್ನಾಳ್ ಅವರು ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪ ಅವರು 2 ಸಾವಿರ ಕೋಟಿ ಕೊಟ್ಟು ಮುಖ್ಯಮಂತ್ರಿ‌ ಆದ್ರು.‌ ಇವರ ಪುತ್ರ ವಿಜಯೇಂದ್ರ ಕೂಡ ದುಡ್ಡು ಕೊಟ್ಟೇ ಪಕ್ಷದ ಅಧ್ಯಕ್ಷ ಆಗಿದ್ದು ಅಂತ ಯತ್ನಾಳ್ ಅವರೇ  ಹೇಳಿದ್ದಾರೆ. ಇವರಿಗೆ ಸಾವಿರ ಸಾವಿರ ಕೋಟಿ ಎಲ್ಲಿಂದ ಬಂತು?  ಇದರ ಸತ್ಯಾಸತ್ಯತೆ ಕೂಡ ಬಯಲಾಗಬೇಕು ಎಂದರು. 

ಗೃಹಲಕ್ಷ್ಮಿಗೆ ಹಂಚಲು ಹಣ ಇಲ್ಲ ಅಂತ ದೇವೇಗೌಡರು ನೀಡಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅವರ ಮಾತು ಸುಳ್ಳು.‌ ಅಕ್ಟೋಬರ್ ವರೆಗೂ ಒಂದು ತಿಂಗಳದ್ದೂ ಮಿಸ್ಸಾಗದೆ ಗೃಹಲಕ್ಷ್ಮಿ ಹಣ ನೀಡಿದ್ದೇವೆ ಅಂದರೆ ಏನು ಅರ್ಥ?  ನವೆಂಬರ್ ತಿಂಗಳದ್ದೂ ಸದ್ಯದಲ್ಲೇ ಹಾಕ್ತೀವಿ ಎಂದರು. 

ಸಂಡೂರಿನ ಎಲ್ಲಾ ಪಂಚಾಯ್ತಿಗಳಿಗೂ ಪ್ರಚಾರಕ್ಕೆ ಹೋಗಿ ಬಂದಿದ್ದೀನಿ. ನಿರೀಕ್ಷೆ ಮೀರಿ ಜನರ ಸ್ಪಂದನೆ ಇದೆ. ಅನ್ನಪೂರ್ಣ ತುಕಾರಾಮ್ ಅವರು ಭರ್ಜರಿ ಗೆಲ್ಲುವುದು ಖಚಿತ‌ ಎಂದು ಭರವಸೆ ವ್ಯಕ್ತಪಡಿಸಿದರು. 

ಬಿಜೆಪಿಯವರು ವಕ್ಫ್ ವಿಚಾರವನ್ನು ಉಪಚುನಾವಣೆ ವೇಳೆಯಲ್ಲೇ ಕೃತಕವಾಗಿ ಸೃಷ್ಟಿಸಿರುವುದರ ಹಿಂದಿನ ಉದ್ದೇಶ ಏನು ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ವಕ್ಫ್ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲೇ ಬಿಜೆಪಿ ಘೋಷಿಸಿದೆ. ಬಿಜೆಪಿ ಸರ್ಕಾರವೇ 216 ಮಂದಿ ಒಕ್ಕಲೆಬ್ಬಿಸಲು ನೋಟಿಸ್ ನೀಡಿತ್ತು. ಈಗ ನೋಟಿಸ್ ನೀಡಿದವರೇ ಸುಳ್ಳು ಹೇಳಿಕೆ ನೀಡುತ್ತಾ, ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ.   ಇದು ನಮ್ಮ‌ ಸ್ಪಷ್ಟ ತೀರ್ಮಾನ.‌ ನೋಟಿಸ್ ಗಳನ್ನು ಹಿಂಪಡೆಯಬೇಕು ಎಂದು ಖಡಕ್ ಸೂಚನೆ ನೀಡಿದ್ದೇನೆ,

ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ, ಚುನಾವಣೆ ಪ್ರಣಾಳಿಕೆಯಲ್ಲಿ ಅವರೇ ಹೇಳಿದ್ರು, ರಾಜಕೀಯಕ್ಕಾಗಿ ವಕ್ಫ್ ಕುರಿತು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದರು. 

ರಾಜ್ಯದಲ್ಲಿ 24 ಗಂಟೆ ಗಣಿಗಾರಿಕೆಗೆ ಅವಕಾಶ ನೀಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ಆ ರೀತಿ ಯಾವ ಪ್ರಸ್ತಾಪವೂ ಇದುವರೆಗೂ ನನ್ನ ಗಮನಕ್ಕೆ ಬಂದಿಲ್ಲ.  ನಾವು ಹೋರಾಟ ಮಾಡಿದ್ದು ಅಕ್ರಮ ಗಣಿಗಾರಿಕೆಯ ವಿರುದ್ಧವೇ ಹೊರತು , ಗಣಿಗಾರಿಕೆ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು. 

ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಮ್ ಅವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button