Latest

*ಸಿಎಂ ಬಲಗೈ ಬಂಟ ಕಾಂಗ್ರೆಸ್ ಸೇರ್ಪಡೆ, ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ: ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಲಗೈ ಬಂಟನಂತೆ ಇದ್ದ ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಮಂಜುನಾಥ್ ಕುನ್ನೂರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಬಿಜೆಪಿಯ ಶೋಚನೀಯ ಸ್ಥಿತಿಗೆ ಇದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಚಿಂತಾಮಣಿ, ಕೆ ಆರ್ ಪೇಟೆ, ಶಿಗ್ಗಾವ್ ಹಾಗೂ ಶಿವಮೊಗ್ಗ ಕ್ಷೇತ್ರದ ಅನ್ಯ ಪಕ್ಷಗಳ ನಾಯಕರು ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ರೆಹಮಾನ್ ಖಾನ್ ಅವರ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಅವರು, ‘ರಾಜ್ಯದ ಮುಖ್ಯಮಂತ್ರಿಗಳು ತನ್ನ ಆಪ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವಾಗ ರಾಜ್ಯದ ಜನರ ವಿಶ್ವಾಸ ಗಳಿಸಲು ಸಾಧ್ಯವೇ? ಮಂಜುನಾಥ್ ಕುನ್ನೂರ ಅವರು ಲೋಕಸಭೆ ಮಾಜಿ ಸದಸ್ಯರು, ಮೂರು ಬಾರಿ ಶಾಸಕರಾಗಿದ್ದರು. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ ನಾಯಕರೇ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಈ ಸೇರ್ಪಡೆ ಶಿಗ್ಗಾಂವ್ ಕ್ಷೇತ್ರದಲ್ಲಿ ಮುಂಬರುವ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಮಂಜುನಾಥ್ ಹಾಗೂ ಅವರ ಜತೆ ಬಂದಿರುವ ಎಲ್ಲ ನಾಯಕರಿಗೆ ನಾನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ’ ಎಂದರು.

ಚಿಂತಾಮಣಿಯ ಜೆಡಿಎಸ್ ನಾಯಕರನ್ನು ಸೇರ್ಪಡೆ ಮಾಡಿಕೊಂಡು, ‘ಜಾತ್ಯಾತೀತ ಜನತಾದಳ ತ್ಯಜಿಸಿ ಚಿಂತಾಮಣಿ ಕ್ಷೇತ್ರದ ಮೂವರು ಪ್ರಮುಖ ನಾಯಕರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ.

ಯುವ ಮಿತ್ರ ಸುಧಾಕರ್ ಅವರು ಸಾಕಷ್ಟು ಬಾರಿ ನನ್ನ ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ತಿಳಿಸಿದ್ದರು. ಇಂದು ಪಕ್ಷ ಸೇರ್ಪಡೆ ಹಾಗೂ ವಿವಿಧ ಸಭೆಗಳಿರುವ ಕಾರಣ ರಾಮನಗರ ಪ್ರಜಾಧ್ವನಿ ಯಾತ್ರೆ ರದ್ದು ಮಾಡಿದ್ದೇನೆ. ಇಂದು ಚಿಂತಾಮಣಿಯ ರಿಯಾಜ್ ಪಾಷಾ, ಮಹೇಶ್, ಭಾಸ್ಕರ್, ಕೃಷ್ಣಾ ರೆಡ್ಡಿ ಅಮರ್, ಮಹಮದ್ ಶಫಿವುಲ್ಲಾ, ಸಾಮ್ರಾಟ್, ಇರ್ಫಾನ್ ಖಾನ್, ಆರ್. ಪ್ರಸಾದ್, ವೆಂಕಟರೆಡ್ಡಿ, ನವೀನ್, ವಿಜಯ್, ಶ್ರೀನಿವಾಸ್ ಯಾದವ್ ಸೇರಿದಂತೆ ವಿವಿಧ ಸಮುದಾಯದ ಅನೇಕ ಮುಖಂಡರು ಪಕ್ಷ ಸೇರುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಮಾತ್ರವಲ್ಲ, ರಾಜ್ಯ ಹಾಗೂ ದೇಶಕ್ಕೆ ಶಕ್ತಿ ತುಂಬಲು ನೀವೆಲ್ಲ ಕಾಂಗ್ರೆಸ್ ಸೇರುತ್ತಿದ್ದೀರಿ. ನಿಮಗೆ ಸ್ವಾಗತ ಕೋರುತ್ತೇನೆ.

ರಾಹುಲ್ ಗಾಂಧಿ ಅವರು ದೇಶದ ಪರವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಅವರ ಸದಸ್ಯತ್ವ ಅನರ್ಹ ಮಾಡಿದ್ದಾರೆ. ಅವರಿಗೆ ಶಕ್ತಿ ತುಂಬಲು ನೀವು ಬಂದಿದ್ದು, ನಿಮ್ಮನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಹಳಬರು ಹೊಸಬರು ಎಂಬ ಯಾವುದೇ ವ್ಯತ್ಯಾಸವಿಲ್ಲದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

ಸುಧಾಕರ್ ಅವರನ್ನು ನಾವು ಪಕ್ಷದ ಅಭ್ಯರ್ಥಿ ಎಂದು ತೀರ್ಮಾನಿಸಿದ್ದು, ನೀವೆಲ್ಲರೂ ಸೇರಿ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಬೇಕು’ ಎಂದು ಕರೆ ನೀಡಿದರು.

ಕೆ.ಆರ್ ಪೇಟೆಯ ಜೆಡಿಎಸ್ ನಾಯಕ ದೇವರಾಜ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ, ‘ಮಂಡ್ಯ ಜಿಲ್ಲೆಯ ರಾಜಕೀಯ ಇಂದು ಹೊಸ ತಿರುವು ಪಡೆಯುತ್ತಿದೆ. ಬಹಳಷ್ಟು ನಾಯಕರು ಜೆಡಿಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಕಳೆದ ಕೆ.ಆರ್. ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ದೇವರಾಜ್ ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ.

ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ಗೆಲ್ಲಿಸಲು ಪ್ರಯತ್ನಿಸಿದೆವು. ಆದರೆ ಅವರು 3ನೇ ಸ್ಥಾನ ಪಡೆಯಬೇಕಾಯಿತು. ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಕೆ.ಆರ್ ಪೇಟೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಆ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ವಕೀಲರಾಗಿ ಕೆಲಸ ಮಾಡಿಕೊಂಡು ಬಂದಿರುವ ದೇವರಾಜ್ ಅವರು ಸರಳ ಸಜ್ಜನ ವ್ಯಕ್ತಿ. ಅವರು 1999ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ನಂತರ 2019ರ ಉಪಮುನಾವಣೆ ಸಮಯದಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ 57 ಸಾವಿರ ಮತ ಪಡೆದಿದ್ದರು. ಅವರು ಯಾವುದೇ ಷರತ್ತು ಇಲ್ಲದೆ, ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಈ ರಾಜ್ಯ ಹಾಗೂ ಕೆ.ಆರ್ ಪೇಟೆಗೆ ಒಳ್ಳೆಯದಾಗಬೇಕು ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಯಸುತ್ತೇನೆ. ಜೆಡಿಎಸ್ ಹಾಗೂ ಬಿಜೆಪಿ ಮಣಿಸುವುದು ನಮ್ಮ ಗುರಿ ಹೀಗಾಗಿ ನಾವು ಷರತ್ತು ಇಲ್ಲದೇ ಸೇರುತ್ತೇನೆ ಎಂದು ಅವರು ಇಲ್ಲಿಗೆ ಬಂದಿದ್ದಾರೆ. ಇವರ ಜತೆ ಸಾವಿರಾರು ಮಂದಿ ಬೆಂಬಲಿಗರು ಬಂದಿದ್ದಾರೆ. ಹೊಸಬರು, ಹಳಬರು ಎಂಬ ವ್ಯತ್ಯಾಸ ಬೇಡ. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ನೀವೆಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾಳೆಯಿಂದಲೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳನ್ನು ಬೂತ್ ಮಟ್ಟದಲ್ಲಿ ಜನರಿಗೆ ತಲುಪಿಸಬೇಕು’ ಎಂದು ತಿಳಿಸಿದರು.

‘ಶಿವಮೊಗ್ಗದ ಜೆಡಿಎಸ್ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಕೂಡ ಪಕ್ಷಕ್ಕೆ ಬಂದಿದ್ದು, ಅವರನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸ್ವಾಗತಿಸುತ್ತೇನೆ. ಗುಬ್ಬಿ ವಾಸು ಅವರು ಕೂಡ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ಸೇರಲು ಅರ್ಜಿ ಹಾಕಲು ಬಂದಿದ್ದಾರೆ. ಅವರನ್ನು ಮತ್ತೊಂದು ದಿನ ಕಾರ್ಯಕ್ರಮ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದರು.

ಪ್ರಶ್ನೋತ್ತರ:

ಬ್ರಿಟೀಷರ ಸೇನೆ ಟಿಪ್ಪುವನ್ನು ಕೊಂದಿದೆ ಎಂದು ಇತಿಹಾಸಕಾರರು ದಾಖಲೆ ಸಮೇತ ಹೇಳಿರುವ ಬಗ್ಗೆ ಗಮನ ಸೆಳೆದಾಗ, ‘ಇತಿಹಾಸಕಾರರು ಸತ್ಯವನ್ನು ಬಯಲಿಗೆಳೆದು ಬಿಜೆಪಿಯ ಸುಳ್ಳನ್ನು ಬೆತ್ತಲೆಗೊಳಿಸಿದ್ದಾರೆ. ಬಿಜೆಪಿಯವರು ಚುನಾವಣೆ ಸಮಯದಲ್ಲಿ ಜನರನ್ನು ದಾರಿ ತಪ್ಪಿಸಲು ಉರಿಗೌಡ, ನಂಜೇಗೌಡ ಟಿಪ್ಪುವನ್ನು ಕೊಂದರು ಎಂದು ಹೇಳುತ್ತಿದ್ದಾರೆ. ಇವು ಕೇವಲ ಕಾಲ್ಪನಿಕ ಪಾತ್ರಗಳಾಗಿದ್ದು, ಈ ಪಾತ್ರಗಳಿಗೆ ಅಶ್ವತ್ಥ್ ನಾರಾಯಣ ತಂದೆ, ಸಿ.ಟಿ ರವಿ ತಾಯಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿವೆ. ಇದು ಈಗಿನ ಇತಿಹಾಸ.

ಇತಿಹಾಸಕಾರರು ನಿಜವಾದ ಇತಿಹಾಸದ ಬಗ್ಗೆ ದಾಖಲೆ ಸಮೇತ ಟಿಪ್ಪುವನ್ನು ಬ್ರಿಟೀಷರ ಸೇನೆ ಕೊಂದಿದೆ ಎಂದು ಹೇಳಿದ್ದಾರೆ. ನಮ್ಮ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರು ರಾಜ್ಯ ವಿಧಾನಮಂಡಲದಲ್ಲಿ ಟಿಪ್ಪು ಕುರಿತು ಭಾಷಣ ಮಾಡಿದ್ದಾರೆ. ಬಿಜೆಪಿಯ ಸುಳ್ಳಿನ ಇತಿಹಾಸವನ್ನು ಇತಿಹಾಸಕಾರರು ನಗ್ನಗೊಳಿಸುತ್ತಿದ್ದಾರೆ. ದೇಶ ಹಾಗೂ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಆಮೂಲಕ ಚುನಾವಣೆ ಗೆಲ್ಲಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ.

ಉರಿಗೌಡ ಎಂದು ತಿಗಳ ಸಮುದಾಯದಲ್ಲೂ ಇದ್ದಾರೆ, ನಂಜೇಗೌಡ ಎಂದು ಕುರುಬ ಸಮುದಾಯದಲ್ಲೂ ಇದ್ದಾರೆ. ಆದರೆ ಬಿಜೆಪಿಯವರು ಎಲ್ಲ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಖಂಡನೀಯ. ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಬಿಜೆಪಿ ನಾಯಕರ ವಿರುದ್ಧ ಕೆಂಡ ಕಾರಿದರು.

ಮೀಸಲಾತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಸಮಾಜದ ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು ಮೀಸಲಾತಿ ವಿಚಾರವಾಗಿ ಬೇಡಿಕೆ ಇಟ್ಟಿದ್ದು, ಬಿಜೆಪಿ ಮೀಸಲಾತಿ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದೆ. ಲಿಂಗಾಯತರು ಶೇ.16, ಒಕ್ಕಲಿಗರು ಶೇ.12ರಷ್ಟು ಮೀಸಲಾತಿ ಕೇಳಿದ್ದಾರೆ. ಅಲ್ಪಸಂಖ್ಯಾತರಿಗೆ ಇದ್ದ ಶೇ.4 ರಷ್ಟು ಕಸಿದು ಈ ಸಮುದಾಯಗಳಿಗೆ ಕೇವಲ ತಲಾ 2% ನೀಡಿದೆ. ಲಿಂಗಾಯತರು, ಒಕ್ಕಲಿಗರು ರೈತ ಸಮುದಾಯದವರಾಗಿದ್ದು, ಇವರು ಭಿಕ್ಷುಕರಲ್ಲ. ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಕೇಂದ್ರಕ್ಕೆ ಮೀಸಲಾತಿ ಹೆಚ್ಚಳದ ಬಗ್ಗೆ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದಾಗ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಪತ್ರವನ್ನು ಬಿಡುಗಡೆ ಮಾಡಿದೆ. ಈ ಸರ್ಕಾರ ತೀರ್ಮಾನವನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸರ್ಕಾರದ ಈ ತೀರ್ಮಾನವನ್ನು ರದ್ದು ಮಾಡಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗ ಬಿಜೆಪಿಯವರು ಇಂತಹ ಕುತಂತ್ರ ರೂಪಿಸುತ್ತಿದ್ದಾರೆ. ರಾಜ್ಯದ ಜನ ಇವರ ಕುತಂತ್ರ ಅರ್ಥ ಮಾಡಿಕೊಳ್ಳುವಷ್ಟು ಪ್ರಜ್ಞಾವಂತರಾಗಿದ್ದು, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ’ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button