
ಪ್ರಗತಿವಾಹಿನಿ ಸುದ್ದಿ: ಪಟಾಕಿ ಕಾರ್ಖಾನೆಯೊಂದರಲ್ಲಿ ಏಕಾಏಕಿ ಸ್ಫೋಟ ಸಂಭವಿಸಿ ಮೂವರು ಮಕ್ಕಳು ಸೇರಿದಂತೆ 6 ಜನರು ಸಜೀವದಹನವಾಗಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24ಪರಗಣ ಜಿಲ್ಲೆಯ ಪಥಾರ್ ಪ್ರತಿಮಾದಲ್ಲಿ ನಡೆದಿದೆ.
ಚಂದ್ರನಾಥ್ ಬಾನಿಕ್ ಎಂಬುವವರಿಗೆ ಸೇರಿದ ಪಟಾಕಿ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ಎರಡು ವರ್ಷಗಳಿಂದ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದರು ಎನ್ನಲಾಗಿದೆ.
ತಡರಾತ್ರಿ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು 6 ಜನರು ಬೆಂಕಿಗಾಹುತಿಯಾಗಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ.
ಘಟನಾ ಸ್ಥಳಕ್ಕೆ ದೋಲಾಹತ್ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಿಯಂತ್ರಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.