Politics

*ಭೂಸುಧಾರಣಾ ಕಾಯ್ದೆ ಜಾರಿಗೆ ಶ್ರಮಿಸಿದ ಮಾಜಿ ಸಚಿವ ಬಾಕ್ರಬೈಲು ಸುಬ್ಬಯ್ಯ ಶೆಟ್ಟಿ ನಿಧನ*

ಪ್ರಗತಿವಾಹಿನಿ ಸುದ್ದಿ: ದಿ. ದೇವರಾಜ್ ಅರಸು ಅವರ ಕ್ಯಾಬಿನೆಟ್‌ನಲ್ಲಿ ಭೂ ಸುಧಾರಣಾ ಸಚಿವರಾಗಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದ ಮಾಜಿ ಸಚಿವ ಬಾಕ್ರಬೈಲು ಸುಬ್ಬಯ್ಯ ಶೆಟ್ಟಿ ಅವರು ನಿಧನ ಹೊಂದಿದ್ದಾರೆ.‌

ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಬಾಕ್ರಬೈಲು ಸುಬ್ಬಯ್ಯ ಶೆಟ್ಟಿ (91) ಇಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಾಕ್ರಬೈಲು ಗ್ರಾಮದಲ್ಲಿ 1934ರಲ್ಲಿ ಬಿ.ಸುಬ್ಬಯ್ಯ ಶೆಟ್ಟಿ ಜನಿಸಿದ್ದರು. ತಮ್ಮ ವಿದ್ಯಾಭ್ಯಾಸವನ್ನು ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಪಡೆದಿರುವ ಇವರು, ಬಳಿಕ ಕಾನೂನು ಪದವಿಯನ್ನು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡಿದ್ದರು. ನಂತರ ಸಿಬಿಐ ಹುದ್ದೆಗೆ ನೇಮಕಗೊಂಡು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಸೇವೆಯನ್ನು ಸಲ್ಲಿಸಿದ್ದರು. ನಂತರ ಕಾರಣಾಂತರಗಳಿಂದ ಸಿಬಿಐ ಹುದ್ದೆಯನ್ನು ತ್ಯಜಿಸಿದ್ದ ಇವರು ಕಾನೂನು ಸೇವೆಯನ್ನು ಸಲ್ಲಿಸಿದ್ದರು.

ಆ ಬಳಿಕ ಸುರತ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ 1972ರ ಹಾಗೂ 1978ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಎರಡು ಅವಧಿಯಲ್ಲಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಕ್ಯಾಬಿನೆಟ್‌ನಲ್ಲಿ ಭೂ ಸುಧಾರಣಾ ಸಚಿವರಾಗಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಬಿ ಸುಬ್ಬಯ್ಯ ಅವರು ಸರ್ಕಾರವು ಜಾರಿಗೆ ತಂದಿದ್ದ ಭೂ ಸುಧಾರಣೆ ನೀತಿಯನ್ನು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರಲು ಶ್ರಮಿಸಿದ್ದರು. ರೈತರಿಗೆ ಕೃಷಿ ಭೂಮಿಯ ಮಾಲೀಕತ್ವವನ್ನು ನೀಡುವ ಕ್ರಾಂತಿಕಾರಿ ಪರಿಕಲ್ಪನೆಯನ್ನು ಜಾರಿಗೊಳಿಸಲು ಆರಂಭದಲ್ಲಿ ಸ್ವಂತ ಭೂಮಿಯನ್ನು ಬಿಟ್ಟುಕೊಟ್ಟ ಭೂಮಾಲೀಕರಲ್ಲಿ ಇವರೂ ಒಬ್ಬರು. ಬಳಿಕ ರಾಜ್ಯ ಸರ್ಕಾರದಲ್ಲಿ ಮಾಹಿತಿ, ಇಂಧನ ಹಾಗೂ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಜನತಾ ಪಕ್ಷವನ್ನು ಸೇರಿ ಬಳಿಕ ರಾಜಕೀಯದಿಂದ ನಿವೃತ್ತರಾಗಿದ್ದರು ಎಂದು ಅವರ ಸಮಕಾಲೀನ ಮುಖಂಡರು ನೆನಪಿಸಿಕೊಳ್ಳುತ್ತಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button