
ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ವಿದ್ಯುತ್ ಗೀಸರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಆಗ್ನೇಯ ದೆಹಲಿಯ ಹಜರತ್ ನಿಜಾಮುದ್ದೀನ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಬಂದಿದ್ದು, ಸ್ಥಳಕ್ಕೆ ದೌಡಾಯಿಸಿದಾಗ ಮನೆ ಲಾಕ್ ಆಗಿತ್ತು. ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಪತಿ ಹಾಗೂ ಪತ್ನಿ ಇಬ್ಬರೂ ಪ್ರಜ್ಞೆ ತಪ್ಪಿದ್ದರು.
ಸ್ನಾನದ ಮನೆಯಲ್ಲಿ ಮನೆ ಮಾಲೀಕ ಮೊಗಮ್ಮದ್ ಸಯೀದ್ ಬಿದ್ದಿದ್ದರೆ ಅವರ ಪತ್ನಿ ಫಿದಾ ನಿಜಾಮಿ ಹೊಗೆಯಿಂದ ಉಸಿರಾಡಲಾಗದೇ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪತಿ ಮೊಹಮ್ಮದ್ ಅಷ್ಟರಲ್ಲೇ ಸಾವನ್ನಪ್ಪಿದ್ದರು. ಪತ್ನಿ ಸ್ಥಿತಿ ಕೂಡ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.


