Kannada NewsKarnataka NewsLatest

ಗೋಕಾಕ ಕದನ ಕುತೂಹಲ: ಯಾರಿಗೆ ಕಾಂಗ್ರೆಸ್ ಟಿಕೆಟ್?

ಪ್ರಗತಿವಾಹಿನಿ ಸುದ್ದಿ, ಗೋಕಾಕ  -ಈ ಬಾರಿಯ ಉಪಚುನಾವಣೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಗಮನ ಸೆಳೆಯುತ್ತಿರುವುದು ಗೋಕಾಕ ಕ್ಷೇತ್ರ. ಗೋಕಾಕದ ಶಾಸಕರಾಗಿದ್ದ ರಮೇಶ ಜಾರಕಿಹೊಳಿಯೇ ಈ ಎಲ್ಲ ರಾಜಕೀಯ ಬೆಳವಣಿಗೆಗಳಿಗೆ ಮೂಲ ಎನ್ನುವುದು ಒಂದು ಕಾರಣವಾದರೆ, ಜಾರಕಿಹೊಳಿ ಕುಟುಂಬದ ಸದಸ್ಯರೇ ಪರಸ್ಪರ ಎದುರಾಗಲಿದ್ದಾರೆಯೇ ಎನ್ನುವುದು ಇನ್ನೊಂದು ಕಾರಣ.

ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರಲು ಪ್ರಮುಖ ಕಾರಣ ರಮೇಶ ಜಾರಕಿಹೊಳಿ. ಅವರೇ ಆರಂಭಿಸಿದ್ದ ಭಿನ್ನಮತ ಇಂದು ಉಪಚುನಾವಣೆಯವರೆಗೆ ತಂದು ನಿಲ್ಲಿಸಿದೆ. ಹಾಗಾಗಿ ಗೋಕಾಕ ವಿಧಾನಸಭಾ ಕ್ಷೇತ್ರ ಈ ಬಾರಿ ರಾಜ್ಯದ ಗಮನ ಸೆಳೆದಿದ್ದಷ್ಟೇ ಅಲ್ಲ,  ಎಲ್ಲರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಆದರೆ ಗೋಕಾಕ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಈವರೆಗೂ ಖಚಿತವಾಗಿಲ್ಲ. ಬಿಜೆಪಿಯಿಂದ ರಮೇಶ ಜಾರಕಿಹೊಳಿ ಸ್ಪರ್ಧಿಸುವುದು ಖಚಿತ ಎಂದುಕೊಳ್ಳಲಾಗಿದ್ದರೂ, ಅನರ್ಹರು ಸ್ಪರ್ಧಿಸುವಂತಿಲ್ಲ ಎಂದು ಚುನಾವಣೆ ಆಯೋಗ ಹೇಳಿದ್ದರಿಂದ ರಮೇಶ್ ಸ್ಪರ್ಧೆ ಅತಂತ್ರವಾಗಿದೆ. ಹಾಗಾಗಿ ಅವರು ಮಗ ಅಮರನಾಥನನ್ನೋ ಅಥವಾ ಅಳಿಯ ಅಂಭಿರಾವ್ ಅವರನ್ನೋ ಕಣಕ್ಕಿಳಿಸಬಹುದು ಎನ್ನುವ ಸುದ್ದಿ ಇದೆ. ಸೋಮವಾರ ಸಂಜೆಯ ಹೊತ್ತಿಗೆ ಈ ಬಗ್ಗೆ ಸುಳಿವು ಸಿಗಬಹುದು.

ಕಾಂಗ್ರೆಸ್ ನಲ್ಲಿ ಹಲವು ಆಕಾಂಕ್ಷಿಗಳು

ಗೋಕಾಕ ಕ್ಷೇತ್ರ ಕಾಂಗ್ರೆಸ್ ಕ್ಷೇತ್ರ. ರಮೇಶ ಜಾರಕಿಹೊಳಿ ಕಳೆದ 30 ವರ್ಷದಿಂದ ಈ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದಾರೆ. ಆದರೆ ಈಗ ಅವರು ಬಿಜೆಪಿಗೆ ಸೇರುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಬದಲಿ ಅಭ್ಯರ್ಥಿ ಹುಡುಕಬೇಕಿದೆ.

ರಮೇಶ್ ಜಾರಕಿಹೊಳಿ ಸಹೋದರರಲ್ಲೊಬ್ಬರಾಗಿರುವ ಲಖನ್ ಜಾರಕಿಹೊಳಿ ಅವರನ್ನು ನಿಲ್ಲಿಸಿ, ಗೆಲ್ಲಿಸಲಾಗುವುದು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಈಗಾಗಲೆ ಘೋಷಿಸಿದ್ದಾರೆ. ತಾವು ಚುನಾವಣೆಗೆ ನಿಲ್ಲಲಿ ರೆಡಿ ಎಂದು ಲಖನ್ ಕೂಡ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಒಪ್ಪಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ಅಶೋಕ ಪೂಜಾರಿ ಆಕಾಂಕ್ಷಿ

ಕಳೆದ 3 ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪೈಪೋಟಿ ನಡೆಸುತ್ತ ಬಂದಿರುವ ಅಶೋಕ ಪೂಜಾರಿ ಈಬಾರಿಯೂ ಚುನಾವಣೆಗೆ ನಿಲ್ಲಲು ರೆಡಿಯಾಗಿದ್ದಾರೆ. ಆದರೆ ಸಧ್ಯ ಬಿಜೆಪಿಯಲ್ಲಿರುವ ಅವರಿಗೆ ಬಿಜೆಪಿ ಟಿಕೆಟ್ ಸಿಗುವು ದುರ್ಲಭವಾಗಿದೆ. ಹಾಗಾಗಿ ಅನ್ಯ ಪಕ್ಷಗಳತ್ತ ಅವರ ಚಿತ್ತ ಹರಿದಿದೆ.

ಇಂದಿನಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ. ಜನರ ಅಭಿಪ್ರಾಯ ಕೇಳಿ, ಸೆ.29ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ. ಅವರ ಹೋರಾಟ ಏನಿದ್ದರೂ ಜಾರಕಿಹೊಳಿ ಕುಟುಂಬದ ವಿರುದ್ಧ. ಹಾಗಾಗಿ ಕಾಂಗ್ರೆಸ್ ಅಥವಾ ಜೆಡಿಎಸ್ ನಿಂದ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಅವರಿದ್ದಾರೆ. ಆದರೆ ಲಖನ್ ತಪ್ಪಿಸಿ ಅಶೋಕ ಪೂಜಾರಿಗೆ ಟಿಕೆಟ್ ಕೊಡಲಾಗುತ್ತದೆಯೇ ಎನ್ನುವುದು ಪ್ರಶ್ನೆಯಾಗಿದೆ.

ಪ್ರಕಾಶ ಭಾಗೋಜಿ ಬೆಂಗಳೂರಿಗೆ

ಇನ್ನೋರ್ವ ಕಾಂಗ್ರೆಸ್ ಕಾರ್ಯಕರ್ತ ಪ್ರಕಾಶ ಭಾಗೋಜಿ ಕೂಡ ಟಿಕೆಟ್ ಆಕಾಂಕ್ಷಿ. ತಮಗೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಹೈಕಮಾಂಡ್ ಈ ಹಿಂದೆಯೇ ತಿಳಿಸಿತ್ತು. ನಿನ್ನೆ ಬೆಂಗಳೂರಿನಿಂದ ಕರೆಯೂ ಬಂದಿದೆ. ಹಾಗಾಗಿ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದು ಪ್ರಕಾಶ ಭಾಗೋಜಿ ತಿಳಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಇನ್ನೂ ಹಲವು ಆಕಾಂಕ್ಷಿಗಳಿದ್ದು, ಈವರೆಗೆ ರಮೇಶ್ ಜಾರಕಿಹೊಳಿ ವಿರುದ್ಧ ಧ್ವನಿ ಎತ್ತಲಾಗದೆ ಸುಮ್ಮನಿದ್ದವರೆಲ್ಲ ಈ ಬಾರಿ ಟಿಕೆಟ್ ಕೇಳುತ್ತಿದ್ದಾರೆ. ಬಾಲಾಜಿ ಸಾವಳಗಿ ಕೆಲವು ದಿನಗಳ ಹಿಂದೆ ತಾವೂ ಆಕಾಂಕ್ಷಿ ಎಂದು ಘೋಷಿಸಿದ್ದರು. ಹಾಗಾಗಿ ಜಾರಕಿಹೊಳಿ ಸಹೋದರರ ಮಧ್ಯೆಯೇ ಹೋರಾಟ ನಡೆಯಲಿದೆಯೇ? ಹೊಸಬರ ಎಂಟ್ರಿಯಾಗಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಇವನ್ನೂ ಓದಿ –

ಗೋಕಾಕ, ಅಥಣಿ, ಕಾಗವಾಡ – ಪ್ರತಿಷ್ಠೆಯ ಆಖಾಡ ಸಜ್ಜು

ರಾಜ್ಯ ರಾಜಕೀಯದಲ್ಲಿ ತಲ್ಲಣ, ಎಲ್ಲ ಪಕ್ಷಗಳೂ ಕಂಗಾಲು

ಸರಕಾರ ಕೆಡಗುವ ಶಾಸಕರಿಗೆ ದೊಡ್ಡ ಪಾಠವಾಯಿತೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button