
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸತೀಶ ಗ್ರುಪ್ನ ಬೆಳಗಾಂ ಶುಗರ್ಸ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ 2024-25 ನೇ ಸಾಲಿನ ಕರ್ನಾಟಕ ವಲಯದ ಗೋಲ್ಡನ್ಡ್ ಪ್ರಶಸ್ತಿಯನ್ನು ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆ(ಸಿಸ್ಟಾ) ನೀಡಿ ಗೌರವಿಸಿದೆ.
ಬೆಳಗಾಂ ಶುಗರ್ಸ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯು ರೈತರ ಅಭ್ಯುಧಯವನ್ನೆ ಗುರಿಯನ್ನಾಗಿಸಿಕೊಂಡು ತನ್ನ ಕಾರ್ಯಕ್ಷಮತೆಗೆ ತಕ್ಕಂತೆ ಪರ್ಯಾಪ್ತ ಪ್ರಮಾಣದ ಕಬ್ಬನ್ನು ಲಭ್ಯವಾಗಿಸಿಕೊಳ್ಳುವ ದೃಷ್ಟಿಯಿಂದ ತನ್ನ ಕಾರ್ಯಕ್ಷೇತ್ರದಲ್ಲಿ ವಿವಿಧ ಕಬ್ಬು ಅಭಿವೃದ್ದಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸುಧಾರಿತ ತಳಿಯ ಕಬ್ಬು ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೊಂಡು ಹೆಚ್ಚಿನ ಇಳುವರಿ ಪಡೆಯುತ್ತಿರುವ ಕಾರ್ಯವನ್ನು ಪರಿಗಣಿಸಿ ಕರ್ನಾಟಕ ವಲಯದ ಅತ್ಯುತ್ತಮ ಕಬ್ಬು ಅಭಿವೃದ್ದಿ ಕ್ಷೇತ್ರದಲ್ಲಿ ಗೋಲ್ಡನ್ಡ್ ಪ್ರಶಸ್ತಿಯನ್ನು ಚನ್ನೈನ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆಯು ಸೆ. 19 ರಂದು ಆಂಧ್ರ ಪ್ರದೇಶ ರಾಜ್ಯದ ತಿರುಪತಿಯಲ್ಲಿ ನಡೆದ 54ನೇ ವಾರ್ಷಿಕ ಸಮಾವೇಶದಲ್ಲಿ ಬೆಳಗಾಂ ಶುಗರ್ಸ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾದ ಎಲ್.ಆರ್ ಕಾರಗಿ ಮತ್ತು ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಎಸ್.ಆರ್ ಬಿರ್ಜೆ ಇವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಕ್ಕರೆ ಉದ್ಯಮದ ಕುರಿತು ವಿಶೇಷ ಅಧ್ಯಯನ, ತಾಂತ್ರಿಕತೆ ಅಭಿವೃದ್ದಿ ಹಾಗೂ ವಿವಿದ ವಿಷಯಗಳ ಮಾಹಿತಿ ಶಿಬಿರ ಏರ್ಪಡಿಸುವ ಮೂಲಕ ಸಕ್ಕರೆ ಉದ್ಯಮಕ್ಕೆ ಅತ್ಯಮೂಲ್ಯ ಕೊಡುಗೆ ಮತ್ತು ಪ್ರೋತ್ಸಾಹ ನೀಡುತ್ತಿರುವ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆಯು ಪ್ರತಿ ವರ್ಷ ದಕ್ಷಿಣ ಭಾರತದ ಎಲ್ಲ ಖಾಸಗಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳ ಕಾರ್ಯ ನಿರ್ವಹಣೆಯ ಮಾನದಂಡಗಳ ಮೌಲ್ಯಮಾಪನ ಮಾಡಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕಾರ್ಖಾನೆಗಳಿಗೆ ಈ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ.
ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಕಾರ್ಖಾನೆಯು ಏಳ್ಗೆಯನ್ನು ಸಾಧಿಸುತ್ತಿದ್ದು, ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ರವರಾದ ಪ್ರದೀಪಕುಮಾರ ಇಂಡಿ ಅವರ ನೇತೃತ್ವದ ಆಡಳಿತ ಮಂಡಳಿಯ ನಿರ್ಣಯ, ರೈತ ಭಾಂದವರ ಸಹಕಾರ, ಅಧಿಕಾರಿಗಳ ಮತ್ತು ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಕಾರ್ಖಾನೆಯು ಈ ಪ್ರಶಸ್ತಿ ಪಡೆಯಲು ಪಾತ್ರವಾಗಿದೆ.
ಈ ಸಾಧನೆಯಲ್ಲಿ ಕಾರ್ಖಾನೆಯ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರ ಶ್ರದ್ದೆ ಮತ್ತು ಶ್ರಮವು ಶ್ಲಾಘನೀಯವಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ, ಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರಿಗೂ, ಆಧಿಕಾರಿ ವರ್ಗದವರಿಗೂ, ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ವ ಕಾರ್ಮಿಕ ವರ್ಗದವರಿಗೂ ಮತ್ತು ರೈತ ಭಾಂದವರಿಗೂ, ಹಣಕಾಸು ಸಂಸ್ಥೆಗಳಿಗೂ, ಗ್ರಾಹಕರಿಗೂ ಮತ್ತು ಕಾರ್ಖಾನೆಯ ಎಲ್ಲ ಶ್ರೇಯೋಭಿಲಾಷಿಗಳಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ಸಹ ಎಲ್ಲ ರೈತ ಭಾಂದವರು,ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಕಬ್ಬು ತೋಡ್ನಿ ಮತ್ತು ಸಾರಿಗೆ ಮಕ್ತೆದಾರರು ಇನ್ನೂ ಹೆಚ್ಚಿನ ಸಹಕಾರವನ್ನು ನೀಡಿ ಸಂಸ್ಥೆಯ ಪ್ರಗತಿಗೆ ಶ್ರಮಿಸಬೇಕು ಎಂದು ಬೆಳಗಾಂ ಶುಗರ್ಸ ಚೇರಮನ್ ಮತ್ತು ಸಿ.ಎಪ್.ಓ ಪ್ರದೀಪಕುಮಾರ ಇಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.