Latest

13 ಜಿಲ್ಲೆಗಳಲ್ಲಿ ಪ್ರವಾಹ; 12 ಜನರ ಸಾವು; ಮನೆಹಾನಿಯಾದವರಿಗೆ ತಕ್ಷಣ ಪರಿಹಾರ ನೀಡಲು ಸೂಚಿಸಿದ ಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದ ಮೂರು-ನಾಲ್ಕು ದಿನಗಳಿಂದ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜನ, ಜಾನುವಾರಗಳಿಗೆ ತೊಂದರೆಯಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಮಳೆ ಹಾನಿ ಕುರಿತು ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 13 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯುಮ್ಟಾಗಿದೆ. ಅದರಲ್ಲಿ 17 ತಾಲೂಕುಗಳಲ್ಲಿ ಮಳೆ ಅವಾಂತರ ಹೆಚ್ಚಿದೆ. ಜೂನ್ 1ರಿಂದ ಈವರೆಗೆ ಸುಮಾರು 12 ಜನರು ಸಾವನ್ನಪ್ಪಿದ್ದು, 65 ಜಾನುವಾರಿಗಳಿಗೆ ಜೀವಹಾನಿಯಾಗಿದೆ ಎಂದರು.

Related Articles
Home add -Advt

ಕಳೆದಬಾರಿ ಹಾಗೂ ಈಗ ಭೂಕುಸಿತವುಂಟಾಗಿದ್ದ ಪ್ರದೇಶಗಳ ಕೆಳಗಿರುವ ಜನರನ್ನು ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಹಾಗೂ ಮಳೆ ಹಾನಿಯಿಂದ ತೊಂದರೆಗೀಡಾದ ಜನರನ್ನು ರಕ್ಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವೆಡೆ ಭಾಗಶ: ಭೂಕುಸಿತವಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾದ ಪ್ರದೇಶಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಮಣ್ಣು ತೆರವುಗೊಳಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ಮನೆಹಾನಿಯಾದವರಿಗೆ ತಕ್ಷಣ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು ಹಾಗೂ ಯಾವ ಪ್ರಮಾಣದಲ್ಲಿ ಮನೆ ಹಾನಿಯಾಗಿದೆ ಎಂಬ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಗಳ ಮೂಲಕ ವರದಿ ಮಾಹಿತಿ ನೀಡಿದರೆ ಅದಕ್ಕೆ ಸಂಬಂಧಿಸಿದಂತೆ ಎ,ಬಿ, ಸಿ ಕೆಟಗರಿ ವಿಧಾನದಲ್ಲಿ  ಪರಿಹಾರ ನೀಡಲಾಗುವುದು ಎಂದರು.

ಇನ್ನು ಬೆಳೆ ಹಾನಿಗೂ ಪರಿಹಾರ ವಿತರಿಸಲಾಗುವುದು. ಮಳೆ ನಿಂತ ತಕ್ಷಣ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಲಾಗುವುದು. ರಸ್ತೆ ಮಾರ್ಗ ಹಾನಿ ಬಗ್ಗೆ ಹಾಗೂ ಕಡಲ ಕೊರೆತದ ಬಗ್ಗೆ ವರದಿ ನೀಡಲು ಸೂಚಿಸಲಾಗಿದ್ದು, ಕಡಲ ಕೊರೆತಕ್ಕೆ ಶಾಶ್ವತ ಪರುಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಆದೇಶ ನೀದಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಗಳೂರು, ಕೊಡಗು ಸೇರಿದಂತೆ ಭಾರಿ ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಮಳೆ ಹಾನಿ ಪ್ರಮಾಣ (ಜೂನ್ 1ರಿಂದ ಈವರೆಗೆ)
1. ಪ್ರವಾಹಪೀಡಿತ ಜಿಲ್ಲೆಗಳ ಸಂಖ್ಯೆ 13
2. ತಾಲ್ಲೂಕುಗಳು 17
3. ಗ್ರಾಮಗಳು 37
4. ಬಾಧಿತ ಜನಸಂಖ್ಯೆ 495
5. ರಕ್ಷಿಸಲಾದ ಜನರ ಸಂಖ್ಯೆ 90
6. ತೆರೆಯಲಾಗಿರುವ ಕಾಳಜಿ ಕೇಂದ್ರಗಳು 4
7. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರ ಸಂಖ್ಯೆ 90
8. ಮಾನವ ಜೀವ ಹಾನಿ 12
9. ಜಾನುವಾರು ಜೀವಹಾನಿ 65

• ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಒಟ್ಟು 735.59 ಕೋಟಿ ರೂ. ಲಭ್ಯವಿದೆ.
• ಸಭೆಯಲ್ಲಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಪ್ರವಾಹ ಮುನ್ನೆಚ್ಚರಿಕೆ ಕುರಿತು ಈ ಕೆಳಕಂಡ ಸೂಚನೆಗಳನ್ನು ನೀಡಲಾಯಿತು.
• ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು.
• ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿಯನ್ನು ಆದ್ಯತೆ ಮೇರೆಗೆ ಕೈಗೊಂಡು ಸಂಚಾರ ಸಂಪರ್ಕ ಸಮರ್ಪಕವಾಗಿರುವಂತೆ ಎಚ್ಚರ ವಹಿಸಬೇಕು. ಭೂಕುಸಿತವಾದಲ್ಲಿ ಕೂಡಲೇ ರಸ್ತೆ ತೆರವುಗೊಳಿಸಬೇಕು.
• ಮನೆ ಹಾನಿ ಯಾದಲ್ಲಿ ಮೊದಲು 10 ಸಾವಿರ ತುರ್ತು ಪರಿಹಾರ ಕೂಡಲೇ ಕೊಡಿ. ನಂತರ ಹಾನಿ ಪ್ರಮಾಣವನ್ನು ನಿಯಮಾನುಸಾರ ಅಂದಾಜು ಮಾಡಿ, ವರ್ಗೀಕರಿಸಿ, ರಾಜೀವ್ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
• ಬೆಳೆಹಾನಿಯನ್ನೂ ಮಳೆ ನಿಂತ ಕೂಡಲೇ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಯಿತು.
• ಜೀವ ಹಾನಿ, ಜಾನುವಾರು ಜೀವ ಹಾನಿ ಸಂಭವಿಸಿದಾಗ ತಕ್ಷಣ ಪರಿಹಾರ ವಿತರಿಸಲು ತಿಳಿಸಲಾಯಿತು.
• ಕಂದಾಯ, ಪೊಲೀಸ್, ಅಗ್ನಿಶಾಮಕ ಇಲಾಖೆ, ಮತ್ತು ಇತರ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಲಾಯಿತು.
• ಎಸ್.ಡಿ.ಆರ್.ಎಫ್. / ಎನ್.ಡಿ.ಆರ್.ಎಫ್ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳವಂತೆ ಸೂಚಿಸಲಾಯಿತು.
• ಕಡಲ ಕೊರೆತ ಆದಲ್ಲಿ ತುರ್ತು ಕಾಮಗಾರಿ ಕೂಡಲೇ ಕೈಗೊಂಡು ಹೆಚ್ಚಿನ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಯಿತು.
• ಗ್ರಾಮ ಮಟ್ಟದ ಟಾಸ್ಕ್‍ ಫೋರ್ಸ್ ರಚಿಸಿ, ನೇರ ಸಂಪರ್ಕ ಹೊಂದಲು ತಿಳಿಸಲಾಗಿದೆ. ನಿಯಂತ್ರಣ ಕೊಠಡಿ ಸ್ಥಾಪಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚಿಸಲಾಯಿತು. ಪೊಲೀಸರು ಸೇವೆಗೆ ದಿನದ 24 ಗಂಟೆಯೂ ಲಭ್ಯರಿರಬೇಕು.
• ವಿದ್ಯುತ್ ಕಂಬಗಳು ಬಿದ್ದು ಹೋದಲ್ಲಿ ಕೂಡಲೇ ಸರಿಪಡಿಸಿ, ವಿದ್ಯುತ್ ಸರಬರಾಜು ಅಡಚಣೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.
• ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು, ಪರಿಹಾರ ಕಾರ್ಯಗಳಿಗೆ ಸದ್ಬಳಕೆ ಮಾಡುವಂತೆ ಸೂಚಿಸಲಾಗಿದೆ. ಮಾರ್ಗಸೂಚಿಯನ್ವಯ ಪರಿಹಾರ ನೀಡಿ. ತೊಡಕುಗಳಿದ್ದಾಗ, ವಿಶೇಷ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ವಿಭಾಗದ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಕೆಲಸ ನಿರ್ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ವಿ.ಸೋಮಣ್ಣ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಸುನಿಲ್ ಕುಮಾರ್, ನಾರಾಯಣಗೌಡ, ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಭಿವೃದ್ಧಿ ಆಯುಕ್ತರು ಹಾಗೂ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆಗ ಭಿಕ್ಷೆ ಬೇಡಿರುವ ಹಣ ಎಲ್ಲಿ?; ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ ಸಿಎಂ

Related Articles

Back to top button