Kannada NewsKarnataka NewsLatestNationalPolitics

*ಸಕ್ಕರೆ ವ್ಯಾಪಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ನವದೆಹಲಿ: ಗಣೇಶ ಹಬ್ಬದ ವೇಳೆ ದೇಶದೆಲ್ಲೆಡೆ ಜನಸಾಮಾನ್ಯರಿಗೆ ಸಕ್ಕರೆ ಲಭ್ಯತೆಯಲ್ಲಿ ಯಾವುದೇ ವಿಘ್ನ ಎದುರಾಗದಂತೆ ಕೇಂದ್ರ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಹಾಗು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಸಕ್ಕರೆ ವಹಿವಾಟು ಮೇಲೆ ತೀವ್ರ ನಿಗಾ ವಹಿಸಿದ್ದು, ಅಕ್ರಮ ದಾಸ್ತಾನು ತಡೆ ಮತ್ತು ಬೆಲೆ ಸ್ಥಿರತೆಯತ್ತ ಮಹತ್ವದ ಹೆಜ್ಜೆಯಿರಿಸಿದ್ದಾರೆ.

ಹಬ್ಬದ ಋತುವಿನಲ್ಲಿ ದೇಶಾದ್ಯಂತ ಸಕ್ಕರೆ ಕೃತಕ ಅಭಾವ, ಅಕ್ರಮ ದಾಸ್ತಾನು ತಪ್ಪಿಸಲು ಮತ್ತು ಬೆಲೆ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಎರಡೂವರೆ ತಿಂಗಳ ಕಾಲ ಸಕ್ಕರೆ ದಾಸ್ತಾನು ಮಿತಿಯನ್ನು 2000 ಕ್ವಿಂಟಲ್ ಗೆ ನಿಗದಿಪಡಿಸಿದೆ. ಸೆಪ್ಟೆಂಬರ್ 15 ರಿಂದ ಜಾರಿಗೆ ಬರುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Home add -Advt

ಕೋಲ್ಕತ್ತಾ ಹೊರತುಪಡಿಸಿ ದೇಶದೆಲ್ಲೆಡೆ ನವೆಂಬರ್ 30ರವರೆಗೆ ಅನ್ವಯಿಸುವಂತೆ ಸಕ್ಕರೆ ವಿತರಕರಲ್ಲಿ ದಾಸ್ತಾನು ಮಿತಿಯನ್ನು 2,000 ಕ್ವಿಂಟಲ್ ನಿಗದಿಪಡಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಸಮರ್ಪಕ ಲಭ್ಯತೆ ಇರುವಂತೆ ಹಾಗೂ ಅಕ್ರಮ ದಾಸ್ತಾನು ತಡೆಗಟ್ಟಲು ಬದ್ಧವಾಗಿ ಕೇಂದ್ರ ಸರ್ಕಾರ ಆಗಸ್ಟ್ 1 ರಿಂದ ಜಾರಿ ತಂದಿದ್ದ ಸಕ್ಕರೆ ವಿತರಕರ ದಾಸ್ತಾನು ಮಿತಿಯನ್ನು ಇದೀಗ 4,000 ಕ್ವಿಂಟಾಲ್‌ಗಳಿಂದ 2,000 ಕ್ವಿಂಟಾಲ್‌ಗಳಿಗೆ ಇಳಿಕೆ ಮಾಡಿದೆ ಎಂದಿದ್ದಾರೆ.

ಸಕ್ಕರೆ ವ್ಯಾಪಾರಿಗಳು ಸೆಪ್ಟೆಂಬರ್ 15 ರಿಂದ ಜಾರಿಗೆ ಬರುವಂತೆ ದಾಸ್ತಾನು ಸ್ವೀಕರಿಸಿದ ದಿನದಿಂದ 30 ದಿನಗಳ ಮೀರಿದ ಅವಧಿಗೆ ಯಾವುದೇ ದಾಸ್ತಾನು ಹೊಂದಿರಬಾರದು. ದೇಶಾದ್ಯಂತ ಯಾವುದೇ ಸ್ಥಳದಲ್ಲಿ, ಯಾವುದೇ ಸಮಯಕ್ಕೂ 2,000 ಕ್ವಿಂ.ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಇಡುವಂತಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಕೋಲ್ಕತ್ತಾ ಮತ್ತು ಅದರ ವ್ಯಾಪ್ತಿಯ ಮಹಾನಗರ ಪ್ರದೇಶಗಳು ಮಾತ್ರ ಈ ಮಿತಿಯಿಂದ ಹೊರಗಿದ್ದು, ಸದ್ಯ ಜಾರಿಯಲ್ಲಿರುವ 4,000 ಕ್ವಿಂಟಾಲ್‌ ದಾಸ್ತಾನು ಮುಂದುವರಿಯಲಿದೆ. ಕೋಲ್ಕತ್ತಾವು ಉತ್ತರ ಪ್ರದೇಶ, ಮಹಾರಾಷ್ಟ್ರದಿಂದ ಸಕ್ಕರೆ ಪಡೆಯುತ್ತಿದ್ದು, ಈಶಾನ್ಯ ಮತ್ತು ದೇಶದ ಪೂರ್ವ ಭಾಗಕ್ಕೆ ಸರಬರಾಜು ಮಾಡುತ್ತಿದೆ. ಹಾಗಾಗಿ ಇಲ್ಲಿ ಈಗಿರುವ 4,000 ಕ್ವಿಂ. ಮಿತಿಯನ್ನೇ ಉಳಿಸಲಾಗಿದೆ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.

ತೀವ್ರ ನಿಗಾ ಮತ್ತು ಪರಿಶೀಲನೆ: ದೇಶಡೆಲ್ಲೆಡೆ ಸಕ್ಕರೆ ಕಾರ್ಖಾನೆ, ಡೀಲರ್‌ ಮತ್ತು ವ್ಯಾಪಾರಿಗಳನ್ನು ಒಳಗೊಂಡಂತೆ ಸಕ್ಕರೆ ದಾಸ್ತಾನುಗಳ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಿದ್ದು, ಅಗತ್ಯ ಮೇಲ್ವಿಚಾರಣೆ ಮತ್ತು ಪರಿಶೀಲನೆ ಕೈಗೊಂಡಿದ್ದು, ಈ ಕಾರ್ಯಾಚರಣೆ ಮುಂದಿನ ವಾರಗಳಲ್ಲೂ ಮುಂದುವರಿಯಲಿದೆ. ಪರಿಣಾಮ ದೇಶಾದ್ಯಂತ ಸಕ್ಕರೆ ಸಾಗಣೆ ಮತ್ತು ಮಾರಾಟ ಸುಗಮವಾಗಿದೆ ಎಂದು ತಿಳಿಸಿದ್ದಾರೆ.

ಸಕ್ಕರೆ ಬೆಲೆ ಶೇ.20ರಷ್ಟು ಇಳಿಕೆ: ಕೇಂದ್ರ ಸರ್ಕಾರ ಸಕಾಲದಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮದಿಂದಾಗಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಶೇ.20ರಷ್ಟು ಕಡಿಮೆಯಾಗಿದೆ. ಚಿಲ್ಲರೆ ಬೆಲೆ ಸಹ ಇಳಿಕೆಯ ಪ್ರವೃತ್ತಿ ಪ್ರದರ್ಶಿಸುತ್ತಿದೆ ಮತ್ತು ಎಕ್ಸ್-ಮಿಲ್ ಬೆಲೆಗಳಲ್ಲಿ ಸಹ ಕಡಿತವನ್ನು ಅನುಸರಿಸುವ ನಿರೀಕ್ಷೆಯಿದೆ ಎಂದಿದ್ದಾರೆ

ಆನ್ ಲೈನ್ ಪೋರ್ಟಲ್ ನಲ್ಲಿ ದಾಸ್ತಾನು ನಿರ್ವಹಣೆ: ಕೇಂದ್ರ ಸರ್ಕಾರ, ಪ್ರಸ್ತುತ ಸಕ್ಕರೆ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆನ್‌ಲೈನ್ ಪೋರ್ಟಲ್ ಮೂಲಕ ಸಕ್ಕರೆ ದಾಸ್ತಾನುಗಳ ನಿಗದಿತ ಘೋಷಣೆ ಮತ್ತು ನವೀಕರಣಕ್ಕಾಗಿ ಕಾರ್ಯವಿಧಾನ ಸಹ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ.

ಬೆಲೆ ಸ್ಥಿರತೆಗೆ ಅಗತ್ಯ ಕ್ರಮ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಸಾಕಷ್ಟು ಲಭ್ಯತೆ, ಕ್ರಮಬದ್ಧ ಪೂರೈಕೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನೈಜ ವ್ಯಾಪಾರ ಮತ್ತು ವಿತರಣೆಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಕೃತಕ ಅಭಾವ ಸೃಷ್ಟಿ, ಹೆಚ್ಚಿನ ದಾಸ್ತಾನು ಸಂಗ್ರಹ, ಬೆಲೆ ಏರಿಕೆ ನಿಟ್ಟಿನಲ್ಲಿ ಯಾರಾದರೂ ಮುಂದಾದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.

Related Articles

Back to top button