ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅವರ ಪಕ್ಷದವರೇ ಹಗರಣವನ್ನು ಹೊರತಂದಿದ್ದಾರೆ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಸಿಡಿ ಫ್ಯಾಕ್ಟರಿ ಈಗ ಬಂದ್ ಆಗಿದೆ. ಮುಡಾ ಫ್ಯಾಕ್ಟರಿ ಶುರುವಾಗಿದೆ ಎಂದು ಹೇಳಿದರು.
ಸಿಎಂ ಕುರ್ಚಿಗೆ ಟವೆಲ್ ಹಾಕುವ ವಿಚಾರವಾಗಿ ಅವರ ಪಕ್ಷದವರೇ ಮುಡಾ ಹಗರಣ ಹೊರತಂದಿದ್ದಾರೆ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ಆರೋಪ ಮಾಡಿದ್ದಾರೆ.
ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ? ಮತ್ತು ಹೇಗೆ? ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿರುವವರ ಪಾತ್ರ ಇದೆ ಎಂದು ಟೀಕಿಸಿದ್ದಾರೆ.
ಇದೇ ವೇಳೆ ಮುಡಾ ನೀಡಿರುವ ನಿವೇಶನವನ್ನು ವಾಪಾಸ್ ಪಡೆಯಲಿ, ಅದರ ಬದಲಿಗೆ ಮಾರ್ಕೆಟ್ ದರದಂತೆ ನಮಗೆ 62 ಕೋಟಿ ಹಣ ನೀಡಲಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಕುಮಾರಸ್ವಾಮಿ, ಎಷ್ಟು ಸುಲಭವಾಗಿ ಸಿಎಂ ಈ ಹೇಳಿಕೆ ನೀಡಿದ್ದಾರೆ. ಇವರ ಭೂಮಿಗೆ 62 ಕೋಟಿ ಹಣ ಪರಿಹಾರ ನೀಡಬೇಕು. ಇದೇ ರೀತಿ ಸರ್ಕಾರದ ಯೋಜನೆಗಳಿಗಾಗಿ ರೈತರಿಂದ ವಶಪಡಿಸಿಕೊಳ್ಳುವ ಜಮೀನಿಗೆ ಇವರು ಅದೇ ನಿಯಮ ಅನ್ವಯ ಮಾಡುತ್ತಾರಾ? ಭೂಮಿ ಕಳೆದುಕೊಂಡು ಪರದಾಡುವ ರೈತರ ಬವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾವ ಯೋಚನೆ ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ