
ಪ್ರಗತಿವಾಹಿನಿ ಸುದ್ದಿ: ಅನುಷಾ ಮತ್ತು ಜ್ಞಾನೇಶ್ವರ್ ಎಂಬ ದಂಪತಿ ಪ್ರೇಮ ವಿವಾಹ ಮಾಡಿಕೊಂಡು ಮೂರು ವರ್ಷಗಳಿಂದ ಕುಟುಂಬದಿಂದ ದೂರವಿದ್ದರು, ಇತ್ತೀಚಿನ ದಿನಗಳಲ್ಲಿ ಇವರ ನಡುವೆ ಆಗಾಗ ಜಗಳವಾಗುತ್ತಿತ್ತು. ವೈವಾಹಿಕ ಜಗಳದ ಹಿನ್ನಲೆಯಲ್ಲಿ 27 ವರ್ಷದ ಗರ್ಭಿಣಿ ಪತ್ನಿಯನ್ನು ಪತಿ ಕೊಂದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಪಾಲೆಮ್‌ನ ಉಡಾ ಕಾಲೋನಿಯಲ್ಲಿ ನಡೆದಿದೆ.
ಮೃತ ಅನುಷಾ, 8 ತಿಂಗಳ ಗರ್ಭಿಣಿಯಾಗಿದ್ದು, ಈ ಭಾನುವಾರವೇ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಬೇಕಿತ್ತು. ಒಂದು ವಾರಕ್ಕೆ ಮಗುವಿಗೆ ಜನ್ಮ ನೀಡಬೇಕಾಗಿದ್ದ ತುಂಬು ಗರ್ಭಿಣಿ ಪತಿಯಿಂದಲೇ ಕೊಲೆಯಾಗಿದ್ದಾಳೆ.
ಘಟನೆಯ ನಂತರ, ಜ್ಞಾನೇಶ್ವರ್ ಆಕೆಯ ಕುಟುಂಬಕ್ಕೆ ಕರೆಮಾಡಿ ಅನುಷಾಳಿಗೆ ಹುಷಾರಿಲ್ಲ ಎಂದು ತಿಳಿಸಿದ್ದ. ಶೀಘ್ರದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾದರೂ ವೈದ್ಯರು ಅವಳನ್ನು ಮರಣ ಹೊಂದಿದ್ದಾಳೆ ಎಂದು ಘೋಷಿಸಿದರು.
ಪೊಲೀಸರು ಜ್ಞಾನೇಶ್ವರ್‌ನ ನಡೆಗೆ ಅನುಮಾನ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ, ಆತ ಕೊಲೆ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಜ್ಞಾನೇಶ್ವರ್ ನನಗೆ ಕ್ಯಾನ್ಸರ್ ಇದೆ, ನಾನು ಸಾಯುತ್ತೇನೆ ಎಂಬ ನಾಟಕವಾಡಿದ್ದೂ, ನನ್ನ ಕುಟುಂಬ ನಮ್ಮ ಮದುವೆ ಒಪ್ಪುವುದಿಲ್ಲ ಎಂಬ ಕಾರಣ ಹೇಳುತ್ತಾ ವಿಚ್ಛೇದನದ ಒತ್ತಡ ತರುತ್ತಿದ್ದ. ಆದರೆ ಅನುಷಾ ಯಾವುದೇ ಕಾರಣಕ್ಕೂ ಈ ಸಂಬಂಧವನ್ನು ಮುರಿಯಲು ತಯಾರಾಗಿರಲಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿದೆ.