Belagavi NewsBelgaum NewsKannada NewsKarnataka NewsNationalPolitics

*ದುಧ್‌ಸಾಗರ್  ರೈಲು ಹಳಿಯಲ್ಲಿ ಅಕ್ರಮ ಸಂಚಾರ :32 ಪ್ರವಾಸಿಗರಿಗೆ ದಂಡ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದುಧ್‌ಸಾಗರ್ ಜಲಪಾತ ವೀಕ್ಷಿಸಲು ರೈಲು ಹಳಿಗಳ ಮೂಲಕ ಅಕ್ರಮವಾಗಿ ಚಾರಣ ನಡೆಸುತ್ತಿದ್ದ 32 ಪ್ರವಾಸಿಗರ ವಿರುದ್ಧ ರೈಲ್ವೆ ರಕ್ಷಣಾ ಪಡೆ (RPF) ಕಠಿಣ ಕ್ರಮ ಕೈಗೊಂಡು  ಹದಿನಾರು ಸಾವಿರ ದಂಡ ವಸೂಲಿ ಮಾಡಿದೆ.

ಈ ಘಟನೆ ಜುಲೈ 5ರ ಭಾನುವಾರದಂದು ನಡೆದಿದ್ದು, ಕ್ಯಾಸಲ್‌ರಾಕ್ ರೈಲ್ವೆ ರಕ್ಷಣಾ ಪಡೆಯ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಿ ದುಧ್‌ಸಾಗರ್ (DDS) ಹಾಗೂ ಸೋನಾಲಿಯಂ (LIM) ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ದಿಢೀರ್ ತಪಾಸಣೆ ನಡೆಸಲಾಯಿತು. 

ಈ ವೇಳೆ ಅರಣ್ಯ ಮಾರ್ಗದಿಂದ ಅಸುರಕ್ಷಿತವಾಗಿ ರೈಲು ಹಳಿಗೆ ಪ್ರವೇಶಿಸಿ ದುಧ್‌ಸಾಗರ್ ಜಲಪಾತ ವೀಕ್ಷಣೆಯತ್ತ  ಅಕ್ರಮವಾಗಿ ಚಾರಣ ನಡೆಸುತ್ತಿದ್ದ 32 ಪ್ರವಾಸಿಗರನ್ನು ಪತ್ತೆಹಚ್ಚಿ ಅವರ ವಿರುದ್ಧ  ರೈಲ್ವೆ ಕಾಯ್ದೆಯ ಸೆಕ್ಷನ್ 147 (ಜನ ವಿಶ್ವಾಸ ಕಾಯ್ದೆ) ಅಡಿಯಲ್ಲಿ ಪ್ರತಿಯೊಬ್ಬರಿಂದ ತಲಾ  ₹500ರಂತೆ, ಒಟ್ಟು ₹16,000 ದಂಡ ವಸೂಲಿ ಮಾಡಲಾಗಿದೆ.

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು  ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ದುಧ್‌ಸಾಗರ್ ಜಲಪಾತಕ್ಕೆ ಭೇಟಿ ನೀಡುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದೆ. ಆದಾಗ್ಯೂ, ಮಳೆಗಾಲದಲ್ಲಿ ಕೆಲ ಪ್ರವಾಸಿಗರು ಅರಣ್ಯ ಮಾರ್ಗದಿಂದ  ಗುಪ್ತವಾಗಿ ರೈಲು ಹಳಿಗೆ ಪ್ರವೇಶಿಸಿ ಜಲಪಾತದತ್ತ ಚಾರಣ ನಡೆಸುತ್ತಿರುವುದು ಕಂಡುಬಂದಿದ್ದು, ಇದರಿಂದ ರೈಲು ಸಂಚಾರದ ಸುರಕ್ಷತೆ ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಲೋಕಕುಮಾರ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು (Sr. DSC/UBL) ಅವರ ಮಾರ್ಗದರ್ಶನದಲ್ಲಿ ಹಾಗೂ ರೈಲ್ವೆ ರಕ್ಷಣಾ ಪಡೆ (RPF) ಬೆಳಗಾವಿ ಘಟಕ ಮತ್ತು  In-Charge, Vasco RPF Post ಮೇಲ್ವಿಚಾರಣೆಯಲ್ಲಿ ದೂಧ್‌ಸಾಗರ್ ಪ್ರದೇಶದಲ್ಲಿ ವಿಶೇಷ ನಿಗಾ ವಹಿಸಲಾಗಿದೆ. 

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಪ್ರವಾಸಿಗರು ಇಲ್ಲಿ ಅನಧಿಕೃತವಾಗಿ ಪ್ರವೇಶಿಸದಂತೆ ಹಾಗೂ ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button