*ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅನುಷ್ಠಾನ: ನಿಗದಿತ ಗುರಿ ಸಾಧನೆಗೆ ಡಿಸಿ ಮೊಹಮ್ಮದ್ ರೋಷನ್ ಸೂಚನೆ*
ಪ್ರಗತಿವಾಹಿನಿ ಸುದ್ದಿ,ಬೆಳಗಾವಿ: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ವಿವಿಧ ಇಲಾಖೆಯ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಕಾಲಮಿತಿಯೊಳಗೆ ನಿಗದಿತ ಗುರಿ ಸಾಧನೆಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ (ಆ.31) ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನಮಂತ್ರಿಗಳ 15 ಅಂಶ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಈ ಕಾರ್ಯಕ್ರಮದಡಿ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಫಲಾನುಭವಿಗಳನ್ನು ಇಲಾಖೆಯವತಿಯಿಂದಲೇ ಗುರುತಿಸಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ಸಲಗಾದಲ್ಲಿನ ಮೌಲಾನಾ ಆಝಾದ ಶಾಲೆಯಲ್ಲಿ ಶೌಚಾಲಯ ಇಲ್ಲದಿರುವ ಕುರಿತು ದೂರುಗಳು ಬಂದಿವೆ. ಶಿಕ್ಷಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳು ಸಮನ್ವಯದೊಂದಿಗೆ ಶಾಲೆಯಲ್ಲಿ ಶೌಚಾಲಯಕ್ಕೆ ನಿರ್ಮಾಣಕ್ಕೆ ಕೂಡಲೇ ಕ್ರಮವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಉರ್ದು ಮಾಧ್ಯಮ ಶಾಲೆ ಹಾಗೂ ವಿಧ್ಯಾರ್ಥಿಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಂತಹ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ಪ್ರಾರಂಭಿಸಲು ಹಾಗೂ ಅಂತಹ ಶಾಲೆಗಳನ್ನು ಮೌಲಾನಾ ಆಝಾದ ಶಾಲೆಗಳಾಗಿ ಪರಿವರ್ತಿಸಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.
ವಿದ್ಯಾರ್ಥಿನಿಯರ ಸುರಕ್ಷತೆಗೆ ಆದ್ಯತೆ ನೀಡಬೇಕು
ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಬಹುಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ “ಶಿ ಬಾಕ್ಸ್” (SHEBOX) ಎಂಬ ಪೋರ್ಟಲ್ ಪ್ರಾರಂಭವಾಗಿದೆ ಇದರ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಈ ಪೋರ್ಟಲ್ ಎಲ್ಲ ಇಲಾಖೆಯ ವಸತಿ ಶಾಲೆಗಳಿಗೂ ಅನ್ವಯವಾಗಲಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲ ಶಾಲೆಗಳಲ್ಲಿ ಸಮಿತಿಗಳನ್ನು ರಚಿಸಿ ಮಾಹಿತಿ ನೀಡಬೇಕು. ಶೀಬಾಕ್ಸ್ ಪೋರ್ಟಲ್ ನಲ್ಲಿ ದಾಖಲಾಗುವ ದೂರುಗಳ ಕುರಿತು ನಿಯಮಿತವಾಗಿ ಟ್ರ್ಯಾಕ್ ಮಾಡಲು ತಿಳಿಸಿದರು.
ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ಸೌಲಭ್ಯಗಳನ್ನು ಪಡೆದಂತಹ ಹಾಗೂ ಪಡೆಯಬೇಕಾದಂತಹ ಅಲ್ಪಸಂಖ್ಯಾತ ಕುಟುಂಬಗಳ ವಿವರಗಳನ್ನು ಮುಂದಿನ ಸಭೆಯಲ್ಲಿ ಒದಗಿಸಲು ತಿಳಿಸಿದರು.
ಯೋಜನೆಗಳ ಪ್ರಚಾರ; ಸಮರ್ಪಕ ಅನುಷ್ಠಾನಕ್ಕೆ ಸೂಚನೆ
ಅದೇ ರೀತಿಯಲ್ಲಿ ಇಲಾಖೆಯಿಂದ ನೀಡಲಾಗುತ್ತಿರುವ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು. ಈ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳುವದರ ಮೂಲಕ ಈ ಯೋಜನೆಯಡಿ ಜಾರಿಯಲ್ಲಿರುವ ಎಲ್ಲ ಯೋಜನೆಗಳು ಅಲ್ಪಸಂಖ್ಯಾತ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಕುಂಠಿತವಾಗಿದಂತೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.
ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ನೀಡಲಾಗುವ ಸಾಲ ಯೋಜನೆಗಳ ಕುರಿತು ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಿ ಸಾಲ ಮಂಜೂರಾತಿಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮ ವಹಿಸಬೇಕು. ಒಂದುವೇಳೆ ಬ್ಯಾಂಕ್ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಸೂಕ್ತ ಕಾರಣಗಳನ್ನು ನೀಡಬೇಕು ತಿಳಿಸಿದರು.
ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತರಬೇತಿಗೆ ಹಾಜರಾಗುವ ಎಲ್ಲ ಅಲ್ಪಸಂಖ್ಯಾತ ವಿಧ್ಯಾರ್ಥಿಗಳ ಮಾಹಿತಿ ಕ್ರೋಡೀಕರಿಸಿ ವರದಿ ನೀಡಬೇಕು. ಹೆಸ್ಕಾಂ ವತಿಯಿಂದ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಹೆಚ್ಚುವರಿ ಕಾಮಗಾರಿಗಳ ಕುರಿತು ಕ್ರಿಯಾಯೋಜನೆ ರೂಪಿಸಲು ತಿಳಿಸಿದ ಅವರು ಈ ಕುರಿತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಲು ಸೂಚಿಸಿದರು.
ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ
ಶಾಸಕರಾದ ರಾಜು(ಆಸಿಫ)ಸೇಠ ಅವರು ಮಾತನಾಡಿ, ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೆ ಇದ್ದಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ ಈ ಕುರಿತು ಅಧಿಕಾರಿಗಳು ಗಮನ ಹರಿಸಿ ಶಾಲೆಯಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಲು ಕೂಡಲೇ ಕ್ರಮ ಕೈಗೊಂಡು ವರದಿ ಸಲ್ಲಿಸಲು ತಿಳಿಸಿದರು.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮರ್ಪಕವಾಗಿ ಪೂರೈಸಬೇಕು. ತೋಟಗಾರಿಕೆ ಇಲಾಖೆ ವತಿಯಿಂದ ಜಾರಿಯಲ್ಲಿರುವ ಯೋಜನೆಗಳ ಕುರಿತು ಮುಸ್ಲಿಂ, ಜೈನ್ ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ವರ್ಗದ ರೈತರಲ್ಲಿ ಜಾಗೃತಿ ಮೂಡಿಸಿ ಯೋಜನೆಗಳ ಸದುಪಯೋಗ ಪಡೆಯುವಂತಾಗಬೇಕು. ಈ ಕುರಿತು ತೋಟಗಾರಿಕೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಹೇಳಿದರು.
ಸಾಲ ಸೌಲಭ್ಯದ ಅರ್ಜಿಗಳನ್ನು ವಿನಾಕಾರಣ ತಿರಸ್ಕಾರ ಅಥವಾ ವಿಳಂಬ ಮಾಡಿದ್ದಲ್ಲಿ ಸಂಬಂಧಿಸಿದ ಬ್ಯಾಂಕುಗಳ ಕುರಿತು ಕ್ರಮ ವಹಿಸುವುದಾಗಿ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ಸೂಚನೆ ನೀಡಿದರು.
ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರು ಮಾತನಾಡಿ ಖಾನಾಪುರದಲ್ಲಿನ ಮೌಲಾನ ಆಝಾದ್ ಶಾಲೆಯ ಒಂದೇ ಆವರಣದಲ್ಲಿ ಇತರೆ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಮೌಲಾನಾ ಆಝಾದ್ ಶಾಲೆಗೆ ಮೈದಾನ ಸಮೇತ ಪ್ರತ್ಯೇಕವಾಗಿ ಕನಿಷ್ಠ ಒಂದು ಎಕರೆ ಜಾಗೆಯನ್ನು ನೀಡುವಂತೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಶಾಸಕರು ಸೂಕ್ತ ಜಾಗೆಯನ್ನು ಗುರುತಿಸಿದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಇಲಾಖೆಯ ಕಲ್ಯಾಣಾಧಿಕಾರಿ ಅಬ್ದುಲ್ ರಶೀದ್ ಮಿರಜನ್ನವರ ಅವರು ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ವಿವಿಧ ಇಲಾಖೆಯ ಯೋಜನೆಗಳ ಪ್ರಗತಿ ಮಾಹಿತಿಯೊಂದಿಗೆ ಸಭೆಯನ್ನು ನಿರ್ವಹಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ,
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಶಿವಪ್ರೀಯಾ ಕಡೆಚೂರು, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ್ ಕೂಲೇರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ