ಪ್ರಗತಿವಾಹಿನಿ ಸುದ್ದಿ: ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿದ್ದು ಸಾರ್ವಜನಿಕರ ಬದುಕೇ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಆಯೋಜಿಸುವಂತೆ ಸರ್ಕಾರ ಆದೇಶಿಸಿದೆ.
5 ನೇ ತರಗತಿ ವರೆಗೆ ಮುಂದಿನ ಆದೇಶದವರೆಗೂ ಮಕ್ಕಳಿಗೆ ಆನ್‌ಲೈನ್ ತರಗತಿಗಳೇ ಖಾಯಂ ಆಗಿದೆ. ಸಧ್ಯಕ್ಕೆ ಅತಿ ಹೆಚ್ಚು ಕಲುಷಿತ ನಗರಗಳ ಪೈಕಿ ದೆಹಲಿ ವಿಶ್ವದಲ್ಲೆ ಮುಂಚೂಣಿ ಸ್ಥಾನದಲ್ಲಿದ್ದು, ಜನಸಾಮಾನ್ಯರಿಗೆ ಉಸಿರಾಟದ ಖಾಯಿಲೆಗಳು ಆರಂಭವಾಗಿದೆ. ದೆಹಲಿಯ ಶೇ 60 ರಷ್ಟು ಜನತೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆಂದು ವರದಿಯಾಗಿದೆ. ಹೊಗೆ ಮತ್ತು ಮಂಜಿನ ಮಿಶ್ರಣವಾದ ದಟ್ಟ ಹೊಂಜಿನಿಂದಾಗಿ ವಾತಾವರಣದಲ್ಲಿ ತೆಳುವಾದ ಪರದೆ ನಿರ್ಮಾಣವಾಗಿದೆ.
ಮಿತಿಮೀರಿದ ವಾಹನಗಳ ದಟ್ಟಣೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಕಳೆ ಸುಡುವ ಪ್ರಕ್ರಿಯೆ ಹಾಗೂ ಸರ್ಕಾರದ ಆದೇಶವನ್ನು ಮೀರಿ ಜನರು ಪಟಾಕಿ ಹೊಡೆದು ದೀಪಾವಳಿ ಆಚರಿಸಿದ ಪರಿಣಾಮ ದೆಹಲಿಯ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಪ್ರತಿ ಬಾರಿ ಚಳಿಗಾಲದಲ್ಲಿ ದೆಹಲಿ ವಾಸಿಗಳಿಗೆ ಈ ಪಿಡುಗು ಸಾಮಾನ್ಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ