*ಬೆಳಗಾವಿಯಲ್ಲಿ ಅಮಾನವೀಯ ಘಟನೆ: ಸೀರೆ ಬದಲು ಗೌನ್ ಧರಿಸಿದ ಪತ್ನಿಗೆ ಬೆಂಕಿ ಹಚ್ಚಿದ ಪತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸೀರೆ ಬದಲು ಗೌನ್ ಧರಿಸಿದ್ದಕ್ಕೆ ಗಂಡನೊಬ್ಬ ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ನಾಗರಿಕ ಸಮಾಜವೆ ತಲೆ ತಗ್ಗಿಸುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹತ್ತರವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ತರವಾಡ ಗ್ರಾಮದ ಕೃಷ್ಣಾಜಿ ಪಾಟೀಲ್ ಮತ್ತು ಮಂಜುಳಾ ದಂಪತಿಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ದಿನದಿಂದಲೂ ಕೃಷ್ಣಾಜಿ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಅದೇ ರೀತಿ, ಎಪ್ರಿಲ್ 19 ರಂದು ನಂದಗಡದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಮಂಜುಳಾ ಗೌನ್ ಧರಿಸುವ ವಿಚಾರವಾಗಿ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿದಾಗ, ಕೃಷ್ಣಾಜಿ ಕೋಪಗೊಂಡು ಪತ್ನಿಗೆ ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ.
ಪಕ್ಕದ ಮನೆಯವರು ಘಟನೆಯನ್ನು ಗಮನಿಸಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಕೃಷ್ಣಾಜಿ ಪಾಟೀಲ್‌ನನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡದ್ದ ಮಂಜುಳಾನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



