Kannada NewsLatest

ಜಲಯೋಗ ಈ ಬಾರಿಯ ಆಕರ್ಷಣೆ; ೨೦ರಂದು ಜಾಗೃತಿ ಜಾಥಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಆಯುಷ್ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ ೨೧ ರಂದು ನಗರದ ಗಾಂಧಿಭವನದಲ್ಲಿ   ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ವಿಶ್ವ ಯೋಗ ದಿನಾಚರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ(ಜೂ.೧೭) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜೂನ್ ೨೧ ರಂದು ಬೆಳಿಗ್ಗೆ ೭ ರಿಂದ ೮ ಗಂಟೆಯವರೆಗೆ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ಗಂಟೆಯ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ವಿವಿಧ ಬಗೆಯ ಆಸನಗಳ ಪ್ರದರ್ಶನ, ಪ್ರಾಣಾಯಾಮ, ಧ್ಯಾನ ನಡೆಯಲಿದೆ.
ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಲು ಸಹಕಾರಿಯಾಗಿರುವ ಪಾರಂಪರಿಕ ಯೋಗ ಪದ್ಧತಿಯನ್ನು ಆರೋಗ್ಯದ ದೃಷ್ಟಿಯಿಂದ ಇನ್ನೂ ಹೆಚ್ಚು ಪ್ರಸಿದ್ದಿಗೊಳಿಸುವ ಅಗತ್ಯವಿದೆ ಎಂದ ಜಿಲ್ಲಾಧಿಕಾರಿಗಳು, ಪ್ರತಿವರ್ಷ ಯೋಗ ದಿನಾಚರಣೆಯ ಮೂಲಕ ಯೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.
ಜಿಲ್ಲೆಯ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಅದೇ ರೀತಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯದ ವಿದ್ಯಾರ್ಥಿಗಳು ಮತ್ತು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿಕಲಚೇತನರಿಗೂ ಆಹ್ವಾನಿಸಲು ಸೂಚನೆ:
ನಗರದ ಗಾಂಧೀ ಭವನದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಕ್ಕೆ ವಿಕಲಚೇತನರನ್ನೂ ಆಹ್ವಾನಿಸುವ ಮೂಲಕ ಅವರಿಗೂ ಯೋಗ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೆಲವು ನಿರ್ದಿಷ್ಟ ಆಸನಗಳನ್ನು ಮಾಡುವಾಗ ರಕ್ತದೊತ್ತಡ, ಹೃದಯ ಕಾಯಿಲೆ ಮತ್ತಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದವರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಬೇಕು. ಯಾವ ಆಸನಗಳನ್ನು ಮಾಡಬಾರದು ಎಂಬುದರ ಬಗ್ಗೆಯೂ ಮಾಹಿತಿ ನೀಡುವಂತೆ ತಿಳಿಸಿದರು.
ವಿಕಲಚೇತನರು ಯೋಗ ಪ್ರದರ್ಶನಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನೂ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಲ ಯೋಗ:
ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಕಳೆದ ಬಾರಿಯಂತೆ ಈ ಸಲವೂ ಜಿಲ್ಲಾಡಳಿತ ಹಾಗೂ ಈಜುಗಾರರ ಕ್ಲಬ್ ವತಿಯಿಂದ ಜಲಯೋಗ ಎಂಬ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಜೂನ್ ೨೧ ರಂದು ಸಂಜೆ ಜಿಲ್ಲಾ ಕ್ರೀಡಾಂಗಣದ ಸಮೀಪ ಇರುವ ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಒಲಿಂಪಿಕ್ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಜಲಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗುವುದು.
ಅಂತರ್‌ರಾಷ್ಟ್ರೀಯ ಖ್ಯಾತಿಯ ಈಜು ತರಬೇತುದಾರರಾದ ಉಮೇಶ್ ಕಲಘಟಗಿ ಅವರ ನೇತೃತ್ವದಲ್ಲಿ ೪೦ ಜನರ ತಂಡವು ಜಲಯೋಗ ಪ್ರದರ್ಶನ ನೀಡಲಿದೆ. ಈ ತಂಡದಲ್ಲಿ ವಿಶೇಷ ಚೇತನ ಅಂದರೆ ಕಿವುಡ- ಮೂಗ, ವಿಕಲಚೇತನ, ದೃಷ್ಟಿಹೀನ ಮಕ್ಕಳು ಇರುವುದು ಗಮನಾರ್ಹವಾಗಿದೆ.

ಯೋಗ ನಡಿಗೆ-ಜಾಗೃತಿ ಜಾಥಾ:
ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಒಂದು ದಿನ ಮುಂಚಿತವಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಜೂನ್ ೨೦ ರಂದು ಯೋಗ ನಡಿಗೆ ಜಾಗೃತಿ ಜಾಥಾ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಅಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭಗೊಳ್ಳಲಿರುವ ಜಾಥಾ ಬೋಗಾರವೇಸ್ ವೃತ್ತದವರೆಗೆ ನಡೆಯಲಿದೆ.
ಯೋಗ ಸಂಘಟನೆಗಳ ಸದಸ್ಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ ಸಭೆಯಲ್ಲಿ ವಿವರಿಸಿದರು.
ಜಿಲ್ಲಾಮಟ್ಟದಲ್ಲಿ ಜೂನ್ ೨೧ರಂದು ಒಂದು ಕಾರ್ಯಕ್ರಮ, ಅದೇ ರೀತಿ ಅಂದು ಜಿಲ್ಲೆಯಾದ್ಯಂತ ಆಯುಷ್ ಕೇಂದ್ರಗಳಲ್ಲಿ, ಯೋಗ ತರಬೇತಿ ಕೇಂದ್ರಗಳು ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಸೇವಾ ಕೇಂದ್ರಗಳು ಸೇರಿದಂತೆ ನೂರಾರು ಕಡೆ ಯೋಗ ದಿನಾಚರಣೆ ನಡೆಯಲಿದೆ ಎಂದು ಅವರು ಹೇಳಿದರು.
ಡಿಸಿಪಿ ಯಶೋಧಾ ಒಂಟಿಗೋಡಿ, ಜಿಲ್ಲಾ ಆಯುಷ್ ಅಧಿಕಾರಿ ಸುರೇಶ ದೊಡ್ಡವಾಡ, ಯುಜನಸೇವೆ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಸಿ.ಬಿ.ರಂಗಯ್ಯ, ನೆಹರೂ ಯುವ ಕೇಂದ್ರದ ಮುತಾಲಿಕ ದೇಸಾಯಿ, ವಾರ್ತಾ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ಗುರುನಾಥ ಕಡಬೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೂ ಉಪಸ್ಥಿತರಿದ್ದರು.
ಎಂ.ವೈ.ಗಂಗೂರ ಫೌಂಡೇಷನ್‌ನ ರಮೇಶ್ ಗಂಗೂರ, ಯೋಗ ತರಬೇತುದಾರರಾದ ಪಲ್ಲವಿ ನಾಡಕರ್ಣಿ, ಅಂತರ್‌ರಾಷ್ಟ್ರೀಯ ಖ್ಯಾತಿಯ ಈಜು ತರಬೇತುದಾರರಾದ ಉಮೇಶ್ ಕಲಘಟಗಿ, ನಮ್ಮೂರ ಬಾನುಲಿ ಕೇಂದ್ರದ ಸುರೇಖಾ ಪಾಟೀಲ, ಮೈ ಯೋಗಾ ಅಕಾಡೆಮಿ, ಕೆ.ಎಲ್.ಇ. ಆಯುರ್ವೇದ ಮಹಾವಿದ್ಯಾಲಯ, ಎಂಜಿನಿಯರ್ ಅಕಾಡೆಮಿ, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿನಿಧಿಗಳು, ಯೋಗ ತರಬೇತುದಾರರಾದ ಇಂದಿರಾ ಜೋಶಿ, ಪಲ್ಲವಿ ನಾಡಕರ್ಣಿ, ಪ್ರಜಾಪಿತ ಬ್ರಹ್ಮಕುಮಾರಿ ಸೇವಾಕೇಂದ್ರದ ಪ್ರತಿನಿಧಿಗಳು, ಆಯುಷ್ ಫೆಡರೇಷನ್, ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button