Politics

*ಜಾತಿ ವಿಚಾರದಲ್ಲೂ ಸರ್ಕಾರ ಎಸ್ಐಟಿ ರಚಿಸಿದರೆ ಅಚ್ಚರಿಪಡುವಂತಿಲ್ಲ: ಆರ್. ಅಶೋಕ*

ಪ್ರಗತಿವಾಹಿನಿ ಸುದ್ದಿ: ಒಳ ಮೀಸಲಾತಿ ಮತ್ತು ಜಾತಿ ಗಣತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿದರೆ ಅಚ್ಚರಿ ಇಲ್ಲ ಎಂದು ಪ್ರತಿಪಕ್ಷ ನಾಯಕ ಆ‌ರ್.ಅಶೋಕ್ ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು, ಒಳ ಮೀಸಲಾತಿ ಬಗ್ಗೆ ದೊಡ್ಡದಾಗಿ ಮಾತಾಡುತ್ತಾರೆ. ಒಳ ಮೀಸಲಾತಿ ಜಾರಿಗೆ ಬಿಜೆಪಿ ಪ್ರಯತ್ನ ಮಾಡಿತ್ತು, ಪ್ರಧಾನಿ ಮೋದಿ ಕೂಡ ಅನುಮೋದನೆ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಒಳ ಮೀಸಲಾತಿ ಜಾರಿಗೆ ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈಗ ಎಸ್‌ಐಟಿಯೇ ಕಂಡುಬರುತ್ತಿದೆ. ಒಳ ಮೀಸಲಾತಿ ಮತ್ತು ಜಾತಿ ಗಣತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿದರೆ ಅಚ್ಚರಿ ಇಲ್ಲ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅನ್ವಯವಾಗುತ್ತಿದ್ದು ಎಸ್‌ಐಟಿಯ ಮೇಲೆ ಅನುಮಾನ ಹೆಚ್ಚಾಗಿ ಅದನ್ನೇ ತನಿಖೆ ಮಾಡುವ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

ಎಸ್‌ಐಟಿ ಪ್ರಕಾರ, ಶಾಸಕ ಮುನಿರತ್ನ ಅವರಿಗೆ ಒಂದು ಕಾನೂನು, ವಿನಯ್ ಕುಲಕರ್ಣಿ ಅವರಿಗೆ ಒಂದು ಕಾನೂನು ಎಂಬಂತಾಗಿದೆ. ಎಸ್‌ಐಟಿಗಳ ನಿಜಬಣ್ಣ ಬಯಲು ಮಾಡಲು ಡಬಲ್ ಎಸ್‌ಐಟಿ ಎಂಬ ಘಟಕ ಸ್ಥಾಪಿಸಬೇಕಿದೆ ಎಂದು ವ್ಯಂಗ್ಯವಾಡಿದರು.

ಒಳ ಮೀಸಲಾತಿಯ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಹಿಂದಿನ ನಮ್ಮ ಬಿಜೆಪಿ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತಂದಿತ್ತು. ಪ್ರಧಾನಿ ನರೇಂದ್ರ ಮೋದಿ ತೆಲಂಗಾಣಕ್ಕೆ ಬಂದಾಗ ಒಳ ಮೀಸಲಾತಿಗೆ ಅನುಮೋದನೆ ನೀಡಿದ್ದರು. ಆದರೂ ಕಾಂಗ್ರೆಸ್ ಮಾತ್ರ ಇನ್ನೂ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.

ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕಾಂಗ್ರೆಸ್ ನಾಯಕರು ಚೆನ್ನಾಗಿ ಹಣ ನುಂಗಿದ್ದಾರೆ. ಇದರ ವಿರುದ್ಧ ಬಿಜೆಪಿ ಸಮರ್ಥವಾಗಿ ಪ್ರತಿಭಟನೆ ಮಾಡಿದೆ. ಬಿ.ಎಸ್.ಯಡಿಯೂರಪ್ಪನವರ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೆ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಗೆ ಯಾವುದೇ ತಡೆ ಇಲ್ಲ. ಈ ದೇಶದಲ್ಲಿ ನ್ಯಾಯಾಂಗವೇ ಉನ್ನತವಾದುದು. ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ಬಿಜೆಪಿಗೆ ಬೇಕಿಲ್ಲ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button