
ಪ್ರಗತಿವಾಹಿನಿ ಸುದ್ದಿ: ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರ ಕಾರ್ಯಾಲಯದಲ್ಲಿ ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಮದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಜೀವತೆತ್ತ ಹಿಂದೂಗಳ ಆತ್ಮಕ್ಕೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ ಮಾತನಾಡಿ, ಭಯೋತ್ಪಾದಕರು ಹಿಂದೂ ಪ್ರವಾಸಿಗರ ಹತ್ಯೆ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಹಿಂದೂ ಎಂಬುದನ್ನು ಖಚಿತಪಡಿಸಿಕೊಂಡು ಗುಂಡಿನ ಮಳೆಗರೆದು ಹತ್ಯೆ ಮಾಡಿರುವುದು ಕಟು ಶಬ್ದಗಳಲ್ಲಿ ಖಂಡಿಸಬೇಕಾಗಿದೆ. ಹಿಂದೂಗಳನ್ನೇ ಗುರಿಯನ್ನಾಗಿಸಿರುವ ಜಿಹಾದಿ ರಾಕ್ಷಸರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಅತ್ಯಂತ ಕಠಿಣ ಹಾಗೂ ತ್ವರಿತ ಕ್ರಮ ಕೈಗೊಂಡು ಪ್ರತ್ಯುತ್ತರ ನೀಡಬೇಕು . 3 ಜನ ಕರ್ನಾಟಕದವರು ಸೇರಿದಂತೆ 26 ಜನರನ್ನು ನಿರ್ದಯಿವಾಗಿ ಕೊಂದು ಹಾಕಿರುವ ಭಯೋತ್ಪಾದಕರ ರುಂಡ ಚೆಂಡಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲದೇ, ಶಾಂತಿ ನೆಲೆಸಿರುವ ಜಮ್ಮು ಕಾಶ್ಮೀರದಲ್ಲಿ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡು, ಭಾರತದ ಮೇಲೆ ಕೃತ್ಯ ಎಸಗುವ ಮುನ್ನ ಉಗ್ರರು ನೂರು ಬಾರಿ ಯೋಚಿಸುವಂತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಮುಖಂಡರಾದ ಶಿವಾನಂದ ಬಡ್ಡಿಮನಿ,ಅಜ್ಜಪ್ಪ ಹೊಸುರ,ಆನಂದ ತುರಮರಿ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಗೌಡಪ್ಪ ಹೊಸಮನಿ, ಪುರಸಭೆ ಸದಸ್ಯ ಸಾಗರ ಭಾವಿಮನಿ, ಗ್ರಾ.ಪಂ ಸದಸ್ಯ ನಾಗಪ್ಪ ಸಂಗೊಳ್ಳಿ, ಬಸವರಾಜ ಬಡಿಗೇರ,ರವಿ ಹೊಸುರ, ಪ್ರವೀಣ್ ಶಿಂಗಾರಿ, ಶ್ರೀಶೈಲ ಕಟ್ಟಿಮನಿ,ಕುಮಾರ ನಾಗನೂರ, ಸದಾಶಿವಗೌಡ ಪಾಟೀಲ,ಸಿ.ಜಿ.ವಿಭೂತಿಮಠ,ರಾಜು ಗುಡಿಮನಿ,ಬಸವರಾಜ ಗಡದವರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.