
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರ ಹಾಲು, ಆಲ್ಕೊಹಾಲನ್ನೂ ಬಿಡದೆ ಬೆಲೆಗಳನ್ನು ಏರಿಸುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಆಕ್ರೋಶ ಹೊರ ಹಾಕಿದರು.
ಬೆಳಗಾವಿ ನಗರದ ಖಾಸಗಿ ಹೋಟಲ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದಿನ ಸರ್ಕಾರಗಳು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 50 ಲಕ್ಷ ನೀಡುತಿತ್ತು. ಆದರೆ ಈ ಸರ್ಕಾರದಲ್ಲಿ ಐದು ಲಕ್ಷ ಕೂಡ ಹಣ ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಹೇಳುತ್ತೆ ನಾವು ಬಡವರ ಪರವಾಗಿ ಇದ್ದೇವೆ ಎಂದು ಆದರೆ ಮೊನ್ನೆಯಷ್ಟೆ ಮದ್ಯದ ಬೆಲೆ ಹೆಚ್ಚಿಗೆ ಮಾಡಿದ್ದಾರೆ. ಹೆಚ್ಚು ಬೆಲೆ ಇರುವ ಮದ್ಯದ ಬೆಲೆ ಏರಿಸಿಲ್ಲ. ಆದರೆ ಕಡಿಮೆ ಬೆಲೆಯ ಮದ್ಯದ ಬೆಲೆ ಏರಿಸಿ ಬಡ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದರು.
ಈ ಸರ್ಕಾರ ಹಾಲನ್ನೂ ಬಿಡುತ್ತಿಲ್ಲ ಆಲ್ಕೊಹಾಲೂ ಬಿಡುತ್ತಿಲ್ಲ. ಬೆಲೆ ಏರಿಸಿ ಎಲ್ಲ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಗ್ಯಾರಂಟಿ ಒಂದು ಕಡೆ ಕೊಟ್ಟು ಮತ್ತೊಂದು ಕಡೆ ವಾಪಸ್ ಇಸ್ಕೋತಾರೆ ಎಂದು ವಾಗ್ದಾಳಿ ನಡೆಸಿದರು.