ಪ್ರಗತಿವಾಹಿನಿ ಸುದ್ದಿ: “ಕನ್ನಡ ಭಾಷೆಯನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ. ತಾಯಿ ನಾಡಿಗೆ ಗೌರವ ಸಲ್ಲಿಸುವುದರ ಜತೆಗೆ, ಈ ನೆಲಕ್ಕೆ ಕೃತಜ್ಞತೆ ಸಲ್ಲಿಸಿ, ಕನ್ನಡದ ಕೀರ್ತಿ ಪತಾಕೆಯನ್ನು ನಾವೆಲ್ಲರೂ ಹಾರಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡು, 51ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕರ್ನಾಟಕವೇ ನಮ್ಮ ಸ್ವರ್ಗ, ಕನ್ನಡವೇ ನಮ್ಮ ದೇವ ಭಾಷೆ, ತುಂಗ, ಭದ್ರೆ, ಕಾವೇರಿ, ಕೃಷ್ಣ ನದಿಯೇ ನಮಗೆ ಪುಣ್ಯ ತೀರ್ಥ ಎಂದು ಭಾವಿಸಿದ್ದೇವೆ” ಎಂದು ತಿಳಿಸಿದರು.
“ರಾಜ್ಯ ಸರ್ಕಾರ ಹಾಗೂ ವೈಯಕ್ತಿಕವಾಗಿ ರಾಜ್ಯದ ಜನರು ಹಾಗೂ ಎಲ್ಲಾ ಕನ್ನಡಿಗರಿಗೆ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರುತ್ತೇನೆ” ಎಂದರು.
“ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜಗಕೆಲ್ಲ ಜ್ಯೋತಿಯಾಗು ಎಂದು ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರು ನಮಗೆ ನೀಡಿರುವ ಮಾರ್ಗದರ್ಶನ. ಕನ್ನಡ ನಮ್ಮ ಹೆಮ್ಮೆ. ಕನ್ನಡಮ್ಮನ ದೊಡ್ಡ ಹಬ್ಬ ಇದು. ಬದುಕು ನೀಡಿದ ಕರ್ಮ ಭೂಮಿಗೆ ನಾವೆಲ್ಲರೂ ಧನ್ಯವಾದ ಅರ್ಪಿಸಬೇಕು” ಎಂದು ತಿಳಿಸಿದರು.
“ಬದುಕಿನ ಪ್ರತಿ ಕ್ಷಣ ಕನ್ನಡವನ್ನೇ ಉಸಿರಾಗಿಸಿಕೊಳ್ಳಬೇಕು. ಈ ವರ್ಷ ಬೆಂಗಳೂರು ನಗರದಲ್ಲಿ ಎಲ್ಲಾ ಖಾಸಗಿ ಸಂಸ್ಥೆಗಳು, ಶಾಲಾ, ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಆದೇಶ ಮಾಡಿದ್ದೇವೆ” ಎಂದು ಹೇಳಿದರು.
“ನಮ್ಮ ನಾಡಗೀತೆ ಬಹಳ ವಿಶೇಷವಾಗಿದೆ. ಬೇರೆ ರಾಜ್ಯಗಳಲ್ಲಿ ನಾಡ ಗೀತೆ ಹಾಗೂ ನಾಡ ಧ್ವಜವಿಲ್ಲ. ಕುವೆಂಪು ಅವರು ರಚಿಸಿದ ಗೀತೆಯನ್ನು ನಾವು ನಾಡಗೀತೆ ಎಂದು ಹಾಡುತ್ತಿದ್ದೇವೆ. ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಇದೇ ನಮ್ಮ ವಿಶೇಷತೆ. ಇದನ್ನು ಗಮನಿಸಿ ವಿಶ್ವದ ಎಲ್ಲಾ ಭಾಗದಿಂದ ಜನ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.
“ಕನ್ನಡವೇ ನಮ್ಮ ಮನಸ್ಸಿನ ಭಾಷೆ. 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ನಾವು ಉಳಿಸಿಕೊಂಡು ಹೋಗಬೇಕು. ಅನೇಕ ಕನ್ನಡಿಗರು ವಿಶ್ವದ ಮೂಲೆ ಮೂಲೆಯಲ್ಲಿ ಕನ್ನಡ ಹಾಗೂ ಕನ್ನಡದ ಸಂಸ್ಕೃತಿ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಭಾರತ ಮಾತ್ರವಲ್ಲ, ಇಡೀ ವಿಶ್ವದ ಎಲ್ಲಾ ಕನ್ನಡಿಗರು ಒಂದಾಗಿದ್ದಾರೆ. ಕನ್ನಡದ ಅಭಿವೃದ್ಧಿ ಮಿಂಚಿನ ಓಟದಲ್ಲಿ ಸಾಗುತ್ತಿದೆ” ಎಂದರು.
“ನೀವೆಲ್ಲರೂ ದೇಶದ ಆಸ್ತಿ. ಇಡೀ ವಿಶ್ವ ನಿಮ್ಮನ್ನು ನೋಡುತ್ತಿದೆ. ಹೀಗಾಗಿ ಭಾಷೆ, ಸಂಸ್ಕೃತಿಯನ್ನು ಬಹಳ ಗೌರವದಿಂದ ಕಾಪಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ