Belagavi NewsBelgaum NewsKannada NewsKarnataka News

*2026ನೇ ಸಾಲಿನ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪ್ರಕಟ: ಐವರು ಗಣ್ಯ ಸಾಧಕರಿಗೆ ಗೌರವ*

ಪ್ರಗತಿವಾಹಿನಿ ಸುದ್ದಿ: ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜನ್ಮ ದಿನಾಚರಣೆಯ ಸುಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗಜೀವನ ರಾಮ್ ಪ್ರಶಸ್ತಿಯನ್ನು ಘೋಷಿಸಿದೆ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಮತ್ತು ಕಲೆ, ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಐವರು ಗಣ್ಯರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Home add -Advt

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಚಿಸಲಾಗಿದ್ದ ಉನ್ನತ ಮಟ್ಟದ ಆಯ್ಕೆ ಸಮಿತಿಯು ಶಿಫಾರಸು ಮಾಡಿದ ಅರ್ಹ ಸಾಧಕರ ಪಟ್ಟಿಗೆ ಸರ್ಕಾರವು ಅನುಮೋದನೆ ನೀಡಿ 2026 ನೇ ಮಾರ್ಚ್ 31 ರಂದು ಆದೇಶ ಹೊರಡಿಸಿದೆ.

ಪ್ರಶಸ್ತಿ ಪುರಸ್ಕ್ರತರಿಗೆ ತಲಾ ರೂ. 5.00 ಲಕ್ಷ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. 

ಪ್ರಶಸ್ತಿ ಪುರಸ್ಕ್ರತರ ವಿವರ

ಚಂದ್ರಮ್ಮ (ಬೆಂಗಳೂರು ಕೇಂದ್ರ)

ಬೆಂಗಳೂರಿನ ಭುವನೇಶ್ವರಿ ನಗರದ ನಿವಾಸಿಯಾದ ಇವರು, ಸಂಘಟನೆ, ಸಾಮಾಜಿಕ ಹೋರಾಟ ಹಾಗೂ ಭೂ ಆಂದೋಲನ ಕ್ಷೇತ್ರಗಳಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಡಿಂಗ್ರಿ ನರಸಪ್ಪ (ಕಲಬುರಗಿ ವಿಭಾಗ)

ರಾಯಚೂರು ಜಿಲ್ಲೆಯ ಆಶಾಪುರ ನಿವಾಸಿಯಾದ ಇವರು, ಜಾನಪದ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಕೊಡುಗೆಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸರಜೂ ಕಾಟ್ಕರ್ (ಬೆಳಗಾವಿ ವಿಭಾಗ)

ಬೆಳಗಾವಿಯ ಮಹಾಂತೇಶನಗರದ ನಿವಾಸಿಯಾದ ಇವರು, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸಾಧಕರಾಗಿದ್ದಾರೆ.

ನಾರಾಯಣ (ಮೈಸೂರು ವಿಭಾಗ)

ಮೈಸೂರಿನ ಮಾಜಿ ಮೇಯರ್ ಆಗಿರುವ ಇವರು, ಆಡಳಿತ ಮತ್ತು ಸಮಾಜ ಸೇವೆಯಲ್ಲಿನ ತಮ್ಮ ದಕ್ಷ ಹಾಗೂ ಜನಪರ ಕಾರ್ಯಗಳಿಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನರಸೀಯಪ್ಪ (ಬೆಂಗಳೂರು ವಿಭಾಗ)

ತುಮಕೂರಿನ ಮಾಜಿ ನಗರಸಭೆ ಸದಸ್ಯರಾದ ಇವರು, ಜನಸಾಮಾನ್ಯರ ಪರವಾದ ಹೋರಾಟ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಆಯ್ಕೆಯಾಗಿದ್ದಾರೆ.

ಸಮಾರಂಭದ ವಿವರ

ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನವಾದ ಏಪ್ರಿಲ್ 05, 2026 ರಂದು ಬೆಂಗಳೂರಿನ ವಿಧಾನಸೌಧ ಪೂರ್ವ ದ್ವಾರದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗುವ ವಿಶೇಷ ಕಾರ್ಯಕ್ರಮದಲ್ಲಿ ಈ ಎಲ್ಲಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button