ಲಘು ಉದ್ಯೋಗ ಭಾರತಿ ಟೆಕ್ ಭಾರತ್ ಮೂಲಕ ಸವಾಲು, ಸಮಸ್ಯೆಗಳನ್ನು ಅರಿತು ಕೆಲಸ ಮಾಡುತ್ತಿದೆ – ಅಶ್ವತ್ಥ್ ನಾರಾಯಣ ಪ್ರಶಂಸೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಲಘು ಉದ್ಯೋಗ ಭಾರತಿ ಟೆಕ್ ಭಾರತ್ ಮೂಲಕ ಸತತವಾಗಿ ಸಮಾಜದ ಸವಾಲು, ಸಮಸ್ಯೆಗಳನ್ನು ಅರಿತುಕೊಂಡು ಕೆಲಸ ಮಾಡುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಹೇಳಿದರು.
ವಿಟಿಯು ಸಭಾಂಗಣದಲ್ಲಿ ಲಘು ಉದ್ಯೋಗ ಭಾರತಿ ವತಿಯಿಂದ ಹಮ್ಮಿಕೊಂಡಿದ್ದ ಟೆಕ್ ಭಾರತ್ ೨೨ ಮೂರನೇ ಆವೃತ್ತಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಇಡೀ ಸಮಾಜದಲ್ಲಿ ಸಂಚಲನ ಮೂಡಿಸುತ್ತಿದೆ. ದೊಡ್ಡ ದೊಡ್ಡ ಸಮಸ್ಯೆ, ಸವಾಲುಗಳನ್ನು ಕ್ಷಣಮಾತ್ರದಲ್ಲಿ ಬಗೆಹರಿಸುತ್ತಿದ್ದು, ನಿರೀಕ್ಷೆಗಿಂತ ಹೆಚ್ಚು ಪರಿಹಾರ ಸಿಗುತ್ತಿದೆ. ೨೧ನೇ ಶತಮಾನ ತಂತ್ರಜ್ಞಾನ, ಆವಿಷ್ಕಾರ ಜ್ಞಾನದ ಯುಗವಾಗಿದೆ. ಕೃಷಿಯಲ್ಲಿಯೂ ಉತ್ಕೃಷ್ಟ ತಂತ್ರಜ್ಞಾನಗಳು ಆವಿಷ್ಕಾರಗೊಂಡಿವೆ. ಆದರೆ ವಿಜ್ಞಾನಿಗಳು ಆವಿಷ್ಕರಿಸಿದ ತಂತ್ರಜ್ಞಾನ ಸಮರ್ಪಕವಾಗಿ ಅಳವಡಿಕೆಯಾಗಬೇಕಿದೆ ಎಂದು ಅವರು ಹೇಳಿದರು.
ನಗರ ಪ್ರದೇಶಗಳಿಗೆ ಅತೀ ಹೆಚ್ಚು ಜನರು ವಲಸೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿತ್ತು. ಆದರೆ ಕೊರೊನಾ ಇದಕ್ಕೆಲ್ಲಾ ದೊಡ್ಡ ಪಾಠ ಕಲಿಸಿದೆ. ಕೋವಿಡ್ ನಂತರ ಎಲ್ಲರೂ ತಮ್ಮ ಮೂಲ ಗ್ರಾಮಗಳಿಗೆ ಮರಳುವಂತಾಗಿದೆ. ತಂತ್ರಜ್ಞಾನದ ಬಳಕೆ ಮಾಡಿಕೊಂಡು ಶಿಕ್ಷಣ, ವಾಣಿಜ್ಯ, ಕೈಗಾರಿಕಾ ಕ್ಷೇತ್ರದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿಯ ಫಲವಾಗಿ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಶೇ. ೬೦ರಷ್ಟು ಜನ ಕೃಷಿ ಆಧಾರಿತ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದರೂ ಜಿಡಿಪಿಯಲ್ಲಿ ಕೃಷಿಯ ಪಾಲು ಶೇ.೧೫ರಷ್ಟು ಮಾತ್ರ ಇದೆ. ಕೃಷಿಯಲ್ಲಿ ಹೆಚ್ಚು ಹೆಚ್ಚು ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಮಾತ್ರ ಈ ವ್ಯತ್ಯಾಸವನ್ನು ಸರಿದೂಗಿಸಿಕೊಳ್ಳಲು ಸಾಧ್ಯ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕಲಿಯುವಿಕೆ ಮತ್ತು ವೃತ್ತಿಯ ನಡುವೆ ಸಮತೋಲನ ಸಾಧ್ಯವಿದೆ. ಕರ್ನಾಟಕವು ದೇಶದ ಶೇ.೫೦ರಷ್ಟು ಕೃಷಿ ಆಧಾರಿತ ಉದ್ಯಮಳನ್ನು ಹೊಂದಿರುವುದು ಹೆಗ್ಗಳಿಕೆಯ ಸಂಗತಿ ಎಂದರು.
ಶಾಸಕ ಅಭಯ್ ಪಾಟೀಲ್ ಮಾತನಾಡಿ, ಬೆಳಗಾವಿಯ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಹಂತ ಹಂತವಾಗಿ ಎಲ್ಲವನ್ನೂ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಘು ಉದ್ಯೋಗ ಭಾರತಿಯ ಕರ್ನಾಟಕ ವಿಭಾಗದ ಅಧ್ಯಕ್ಷ ಸಚಿನ್ ಸಬ್ನಿಸ್, ದೇಶದಲ್ಲಿ ಶೇ.೭೦ರಷ್ಟು ಸಣ್ಣ ರೈತರಿದ್ದಾರೆ. ತಂತ್ರಜ್ಞಾನ ಅಳವಡಿಕೆಯ ಮೂಲಕ ಕೃಷಿಯಲ್ಲಿ ಆರ್ಥಿಕತೆಯನ್ನು ಸುಧಾರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಈ ಬಾರಿ ಅಗ್ರಿಟೆಕ್ ಉದ್ಯಮಗಳ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಟೆಕ್ ೨೨ರಲ್ಲಿ ೪೦ಕ್ಕೂ ಹೆಚ್ಚು ಕೃಷಿ ಮತ್ತು ಸಿದ್ಧ ಆಹಾರದ ಉದ್ಯಮಗಳು ಪಾಲ್ಗೊಂಡಿದ್ದವು. ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಡಿಇಎಂ ಅಧ್ಯಕ್ಷ ಡಾ.ಬಿ.ವಿ. ನಾಯ್ಡು, ಧಾರವಾಡ ಕೃಷಿ ವಿವಿ ಕುಲಪತಿ ಡಾ.ಎಮ್.ಬಿ.ಚೆಟ್ಟಿ, ದಯಾನಂದ ನೇತಲ್ಕರ್, ಶ್ರೀಧರ ಉಪ್ಪಿನ್, ಡಾ. ವಿಷ್ಣುಪ್ರಸಾದ್ ಚೆಟಪಲ್ಲಿ, ನವೀನ್ ಲಕ್ಕೂರ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ