
ಮಹಿಳಾ ಸಮಾವೇಶದಲ್ಲಿ ಸಚಿವೆ ಲಕ್ಷೀ ಹೆಬ್ಬಾಳಕರ್ ಹೇಳಿಕೆ
ಪ್ರಗತಿವಾಹಿನಿ ಸುದ್ದಿ: ನಾನು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿ, ಹಲವು ಏಳು ಬೀಳುಗಳನ್ನು ಕಂಡು ಇಂದು ಸಚಿವೆಯಾಗುವ ಮಟ್ಟಕ್ಕೆ ಬೆಳೆದಿರುವೆ. ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಸಾಕ್ಷಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉದ್ಯಮಭಾಗ್ನಲ್ಲಿರುವ ಫೌಂಡ್ರಿ ಕ್ಲಸ್ಟರ್ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನಾನು 1998ರಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ಕಾಂಗ್ರೆಸ್ ಪಕ್ಷವನ್ನು ಪ್ರವೇಶಿಸಿದೆ. ಹೋರಾಟದ ಮನೋಭಾವವೇ ನನ್ನನ್ನು ಈ ಮಟ್ಟಿಗೆ ಇಂದು ಬೆಳೆಸಿದೆ ಎಂದರು.
ರಾಜಕೀಯ ಮಹಿಳೆಯರಿಗೆ ಅಂದುಕೊಂಡಷ್ಟು ಸುಲಭವಲ್ಲ. ನಾನು ಜಿಲ್ಲಾ ಪಂಚಾಯಿತ್ ಚುನಾವಣೆಗೆ ನಿಲ್ಲಲು ಟಿಕೆಟ್ ಕೇಳಿದಾಗ ಕೊಡಲಿಲ್ಲ, 2007ರಲ್ಲಿ ಬೆಳಗಾವಿ ಕಾರ್ಪೋರೇಷನ್ ಚುನಾವಣೆಗೆ ಹಾಗೂ 2009ರಲ್ಲಿ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿದರೂ ಟಿಕೆಟ್ ಕೊಡಲಿಲ್ಲ. ನಾನು ಇದನ್ನೇ ಸವಾಲಾಗಿ ಸ್ವೀಕರಿಸಿ, ವೈಯಕ್ತಿಕವಾಗಿ ಪ್ರಬಲವಾದೆ. ಲೋಕಸಭಾ ಸದಸ್ಯೆಯಾಗುವುದು ಇಂದಿಗೂ ನನ್ನ ದೊಡ್ಡ ಕನಸು. ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಮರಿಸಿದರು.

2013ರಲ್ಲಿ ನಾನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದೆ. ನಾನು ಬೇರುಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದ ಫಲವಾಗಿ 2013ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟರು. ನಾನು ಮೂಲತಃ ಖಾನಾಪುರದವಳು, ಇದರಿಂದಾಗಿಯೇ ನನಗೆ ಪ್ರಚಾರ ಮಾಡಲು ಸರಿಯಾಗಿ ಬೆಂಬಲ ಸಿಗಲಿಲ್ಲ. ಆದರೂ ಹೋರಾಡಿದ್ದರಿಂದ ಕಡಿಮೆ ಅಂತರದಿಂದ ಸೋತೆ. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿತು. ಆದರೆ, ಮೋದಿ ಅಲೆಯಲ್ಲಿ ಸೋಲಬೇಕಾಯಿತು ಎಂದರು.
ಸತತ ಎರಡು ಚುನಾವಣೆಗಳಲ್ಲಿ ಸೋತರೂ ನಾನು ಧೃತಿಗೆಡದೆ ಮನೆಯಲ್ಲಿ ಕೂರಲಿಲ್ಲ. ಕ್ಷೇತ್ರದಲ್ಲಿ ಸತತವಾಗಿ ಒಡನಾಟ ಇಟ್ಟುಕೊಂಡಿದ್ದರಿಂದ 2018ರಲ್ಲಿ ಒಂದು ಲಕ್ಷದ 10 ಸಾವಿರ ಮತಗಳನ್ನು ಪಡೆದು 52 ಸಾವಿರ ಮತಗಳ ಅಂತರದಿಂದ ಗೆದ್ದೆ. ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದ ಎಂಬುದಕ್ಕೆ ನಾನೇ ಸಾಕ್ಷಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುತ್ತಿದ್ದೇನೆ. ಜನರು ಯಾವ ಕೆಲಸ ಆಗುವುದಿಲ್ಲ, ಅದನ್ನು ನಮ್ಮ ಹತ್ರ ತೆಗೆದುಕೊಂಡು ಬರುತ್ತಾರೆ. ಅಂತಹ ಕೆಲಸಗಳನ್ನು ಮಾಡಿಕೊಡುವುದೇ ಜನಪ್ರತಿನಿಧಿಗಳ ಕೆಲಸ. ಎಲ್ಲಾ ಮಹಿಳೆಯರಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿರುವೆ. ನಾನು ತುಂಬಾ ಅಧ್ಯಯನ ಮಾಡಿ ಮಾತನಾಡುವೆ, ನಾನು ರಾಜಕಾರಣಿ ಆಗಲಿಲ್ಲ ಅಂದಿದ್ದರೆ, ವೈದ್ಯೆ ಆಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೊಂಡರು.
ಈ ವೇಳೆ ರವೀಂದ್ರ ಎನರ್ಜಿ ಲಿಮಿಟೆಡ್ನ ವಿದ್ಯಾ ಮುರ್ಕುಂಬಿ, ಪಟ್ಟೇದ ಫರ್ಟಿಲಿಟಿ ಮತ್ತು ರಿಸರ್ಚ್ ಸೆಂಟರ್ನ ನಿರ್ದೇಶಕರಾದ ಡಾ.ಶೋಭನಾ ಪಟ್ಟೇದ್, ಸೆಂಟ್ರಾಕೇರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ನೀತಾ ದೇಶಪಾಂಡೆ, ಡಾ.ಹಿತಾ ಎಂ. ಹೆಬ್ಬಾಳಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
