Belagavi NewsBelgaum NewsKannada NewsKarnataka NewsNationalTravel

*ಭೂ ಕುಸಿತ: ಮುಂಬೈ ಮತ್ತು ಪುಣೆ ನಡುವಿನ ರೈಲ್ವೆ, ರಸ್ತೆ ಸಂಚಾರ ಬಂದ್*

ಪ್ರಗತಿವಾಹಿನಿ ಸುದ್ದಿ: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಬೈ ಮತ್ತು ಪುಣೆ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಇಂದು ಬೆಳಗ್ಗೆ ಮಹಾರಾಷ್ಟ್ರದ ಕರ್ಜತ್-ಲೋನಾವಾಲಾ ನಡುವಿನ ಬೋರ್ ಘಾಟ್ ವಿಭಾಗದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ರಸ್ತೆ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿದೆ.

ಖಂಡಾಲಾ ಮತ್ತು ಮಂಕಿ ಹಿಲ್ ನಡುವೆ ರೈಲ್ವೆ ಹಳಿಗಳ ಮೇಲೆ ಬೃಹತ್ ಬಂಡೆಗಳು ಕುಸಿದು ಬಿದ್ದಿರುವುದರಿಂದ ಮೂರೂ ರೈಲ್ವೆ ಲೈನ್‌ಗಳು ಬಂದ್ ಆಗಿವೆ. ಇದರಿಂದಾಗಿ ಡೆಕ್ಕನ್ ಕ್ಲೀನ್ ಮತ್ತು ಸಿಂಹಗಡ ಸೇರಿದಂತೆ 16ಕ್ಕೂ ಹೆಚ್ಚು ಪ್ರಮುಖ ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಪ್ರಯಾಣಿಕರು ನಿಲ್ದಾಣಗಳಲ್ಲಿ ಸಿಲುಕಿದ್ದಾರೆ.

ಇತ್ತ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಹೊಸ ಸುರಂಗ ಮಾರ್ಗದ ಬಳಿಯೂ ಮಣ್ಣು ಕುಸಿದಿರುವುದರಿಂದ ಹೆದ್ದಾರಿಯನ್ನು ಮುಚ್ಚಲಾಗಿದೆ. ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲೂ ನೀರು ತುಂಬಿರುವುದರಿಂದ ವಾಹನ ಸವಾರರು ಮಾರ್ಗ ಮಧ್ಯೆಯೇ ಗಂಟೆಗಟ್ಟಲೆ ಕಾಯುವಂತಾಗಿದ್ದು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಮುಂದಿನ ಕೆಲವು ಗಂಟೆಗಳ ಕಾಲ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಪುಣೆಗೆ ರೆಡ್ ಅಲರ್ಟ್ ಘೋಷಿಸಿದೆ. 

ಪರಿಸ್ಥಿತಿ ಸುಧಾರಿಸುವವರೆಗೆ ಸಾರ್ವಜನಿಕರು ಮುಂಬೈ-ಪುಣೆ ನಡುವೆ ಪ್ರಯಾಣ ಮಾಡದಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Related Articles

Back to top button