ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ದರ್ಶನ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ‘ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನ್ನಾಚೆ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳಗಾವಿ ಉತ್ತರ ಶಾಸಕ ಆಸಿಫ್ (ರಾಜು) ಸೇಠ್ ಮಾತನಾಡಿ, ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ ಅರ್ಹ ಮಕ್ಕಳಿಗೆ ಲಸಿಕಾ ಹನಿ ಹಾಕಿ, ಮಾತನಾಡಿ, “ಆರೋಗ್ಯ ಇಲಾಖೆ ಲಸಿಕೆಗಳಿಂದ ಅನೇಕ ಕಾಯಿಲೆಗಳನ್ನು ನಿರ್ಮೂಲನೆ ಮತ್ತು ಹತೋಟಿಯಲ್ಲಿ ಇಟ್ಟಿದೆ. ನಮ್ಮ ಜಿಲ್ಲೆಯಲ್ಲಿ ಯಾರೂ ಲಸಿಕೆಯಿಂದ ವಂಚಿತರಾಗದೇ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಲಸಿಕೆಗಳನ್ನು ಪಡೆದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು” ಎಂದರು.
ಇದೇ ವೇಳೆ ಅವರು ಇಂದ್ರಧನುಷ್ 5.0 ಅಭಿಯಾನದ ಹಾಗೂ ವಿಶ್ವ ಸ್ತನ್ಯಪಾನ ಸಪ್ತಾಹದ ಆರೋಗ್ಯ ಶಿಕ್ಷಣ ಪರಿಕರಗಳನ್ನು ಬಿಡುಗಡೆ ಮಾಡಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಹಾಗೂ ಲಸಿಕಾಧಿಕಾರಿ ಡಾ.ಚೇತನ ಕಂಕಣವಾಡಿ, “ಬೆಳಗಾವಿ ಜಿಲ್ಲೆಯಲ್ಲಿ ಆ. 7 ರಿಂದ 12 ರವರೆಗೆ ಮೊದಲನೆ ಸುತ್ತು, ಸೆಪ್ಟಂಬರ್ 11 ರಿಂದ 16 ರವರೆಗೆ 2ನೇ ಸುತ್ತು. ಹಾಗೂ ಅಕ್ಟೋಬರ್ 9 ರಿಂದ 14 ರವರೆಗೆ 3ನೇ ಸುತ್ತು ಈ ಮೂರು ಸುತ್ತುಗಳಲ್ಲಿ ತೀವ್ರ ಇಂದ್ರಧನುಷ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ “ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನದಡಿ ಸೂಕ್ತ ತಯಾರಿಗಳನ್ನು ಮಾಡಿಕೊಂಡಿದ್ದು, ಸಮೀಕ್ಷೆ ಮೂಲಕ ಲಸಿಕೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನೀಡಲಾಗುವ ಲಸಿಕೆಯನ್ನು ಪಡೆಯದೇ ಅಥವಾ ಅರ್ಧಕ್ಕೆ ಬಿಟ್ಟುಹೋದ ಒಟ್ಟು 11536 ಎರಡು ವರ್ಷದೊಳಗಿನ ಮಕ್ಕಳು’ 2943 ಎರಡ ರಿಂದ ಐದು ವರ್ಷದ ಮಕ್ಕಳು ಹಾಗೂ 2596 ಗರ್ಭಿಣಿಯರು, ತೀವ್ರತರ ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ 32 ಮೊಬೈಲ್ ಲಸಿಕಾ ತಂಡಗಳನ್ನು ಮತ್ತು 1129 ಲಸಿಕಾ ಸಮಿತಿಗಳನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗಿದೆ. ಲಸಿಕೆ ಪಡೆಯದ ಗರ್ಭಿಣಿ ಮತ್ತು ಮಕ್ಕಳ ಪಾಲಕರು ತಮ್ಮ ಸಮೀಪದ ಆಶಾ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಭೇಟಿ ಮಾಡಿ ಲಸಿಕೆ ಪಡೆದುಕೊಳ್ಳಬೇಕು” ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ತಿಳಿಸಿದರು.
ರೋಟರಿ ದರ್ಶನದ ಅಧ್ಯಕ್ಷ ರೋಟರಿಯನ್ ಕೋಮಲ್ ಕೋಳಿಮಠ ಮಾತನಾಡಿ, “ಮಾರಕ ರೋಗಗಳ ವಿರುದ್ಧ ನೀಡುತ್ತಿರುವ ಲಸಿಕೆಗಳಿಂದ ಯಾರೂ ವಂಚಿತರಾಗಬಾರದು ಲಸಿಕೆಗಳು ಪರಿಣಾಮಕಾರಿಗಳಾಗಿವೆ” ಎಂದು ತಿಳಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಸ್ವಾಗತಿಸಿ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿ ಬರುವ ಲಸಿಕೆಗಳ ಕುರಿತು ಮಾಹಿತಿ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಉಪ ಮೇಯರ್ ರೇಷ್ಮಾ ಪಾಟೀಲ, ಆಯುಕ್ತ ಅಶೋಕ ದುಡಗುಂಟಿ, ಬಿಮ್ಸ್ ನಿರ್ದೇಶಕ ಡಾ.ಅಶೋಕ ಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುಧಾಕರ ಆರ್.ಸಿ, ಬಿಮ್ಸ್ ಸ್ಥಳೀಯ ವೈದ್ಯಾಧಿಕಾರಿ ಡಾ.ಸರೋಜ ತಿಗಡಿ, ಬೆಳಗಾವಿ ವೃತ್ತದ ಸಮೀಕ್ಷಣಾ ವೈದ್ಯಾಧಿಕಾರಿ ಡಾ.ಸಿದ್ದಲಿಂಗಯ್ಯಾ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಉಪಸ್ಥಿತರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಪಿ ಯಲಿಗಾರ ನಿರೂಪಿಸಿದರು. ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಾಳಗೆನ್ನವರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ