
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮನೆಯಲ್ಲಿ ಮಲಗಿದ್ದ ಮಗುವಿನ ಮೇಲೆ ಚಿರತೆ ದಾಳಿ ಮಾಡಿ ಹೊತ್ತುಕೊಂಡು ಹೋಗಲು ಪ್ರಯತ್ನಿಸಿದ ಘಟನೆ ತಾಲ್ಲೂಕಿನ ಕಣಕುಂಬಿ ಅರಣ್ಯದ ಪಾರವಾಡ ಗೌಳಿ ವಾಡಾ ಗ್ರಾಮದಲ್ಲಿ ಗುರುವಾರ ರಾತ್ರಿ ವರದಿಯಗಿದೆ.
ಗ್ರಾಮದ ಶ್ಯಾಂ ಕಾಳು ಶಿಂಧೆ (೫) ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾದ ದುರ್ದೈವಿ.
ಎಂದಿನಂತೆ ಮನೆಯಂಗಳದಲ್ಲಿ ಆಟವಾಡಿ ಪಡಸಾಲೆಯಲ್ಲಿ ಮಲಗಿದ್ದ ಶ್ಯಾಂ ಮೇಲೆ ದಾಳಿ ನಡೆಸಿದ ಚಿರತೆ ಆತನ ಕುತ್ತಿಗೆ ಹಿಡಿದು ಎಳೆದುಕೊಂಡು ಹೊರಟ ಸಂದರ್ಭದಲ್ಲಿ ಸ್ಥಳೀಯರು ಗಮನಿಸಿ ಮಗುವನ್ನು ಚಿರತೆಯಿಂದ ರಕ್ಷಿಸಿದ್ದಾರೆ.
ಸುದ್ದಿ ತಿಳಿದ ಕಣಕುಂಬಿ ಆರ್.ಎಫ್.ಒ ಕವಿತಾ ಈರನಟ್ಟಿ ಹಾಗೂ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಮಗುವಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಚಿರತೆ ದಾಳಿಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ