ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ. ಅವರನ್ನು ಬದುಕಲು ಬಿಡಿ ಎಂದು ಮಾಜಿ ಸಚಿವ ಉಮೇಶ ಕತ್ತಿ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರಿಗೆ ಆಸ್ಪತ್ರೆಗೆ ಸೇರಿಸುವ ರೋಗವಿಲ್ಲ. ಇದು ತಂದೆಯ ರೋಗ, ತಮ್ಮನ ರೋಗ ಹಾಗೂ ಪಾರ್ಟನರ್ ಗಳ ರೋಗ. ಹಾಗಾಗಿ ಸಿಎಂ ಅವರ ಅಪ್ಪನಲ್ಲಿ, ಅವರ ಅಣ್ಣನಲ್ಲಿ, ಸಮ್ಮಿಶ್ರ ಸರ್ಕಾರದವರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ, ಅವರಿಗೆ ಬದುಕಲು ಬಿಡಿ ಎಂದರು.
ಸಿಎಂ ಕುಮಾರಸ್ವಾಮಿ ಅಥವಾ ದೇವೆಗೌಡ ಇಬ್ಬರಲ್ಲಿ ಒಬ್ಬರು ಗುಡ್ಡ ಸೇರಬೇಕು. ಕುಮಾರಸ್ವಾಮಿ ಮತ್ತು ದೇವೆಗೌಡರ ನಡುವೆ ಸಾಲಮನ್ನಾ ವಿಚಾರದಲ್ಲಿ ಮನಸ್ತಾಪವಿದೆ. ತಂದೆ ಮಗನ ನಡುವೆ ವ್ಯಾಜ್ಯ ಬಂದಿದೆ. ಅದರ ಪ್ರತಿಫಲವೇ ಇಂದಿನ ರಾಯಚೂರಿನ ಕುಮಾರಸ್ವಾಮಿ ಆಕ್ರೋಶವಾಗಿದೆ ಎಂದ ಅವರು, ಸಿಎಂ ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಮಾಜಿ ಪ್ರಧಾನಿ ದೇವೇಗೌಡ ನಿವೃತ್ತಿ ತೆಗೆದುಕೊಂಡು ಯಾವುದಾದರೂ ಗುಡ್ಡ ಸೇರಬೇಕು ಎಂದರು.
ಮುಖ್ಯಮಂತ್ರಿ ಆಡು ಭಾಷೆ ಹದ್ದು ಮೀರಿಹೋಗುತ್ತಿದೆ. ಒಂದೆಡೆ ಅಪ್ಪನ ತೊಂದರೆ, ಮತ್ತೊಂದೆಡೆ ಅಣ್ಣನ ತೊಂದರೆ, ಇನ್ನೊಂದು ಕಡೆ ಸಮ್ಮಿಶ್ರ ಸರ್ಕಾರದ ತೊಂದರೆ. ಸಿಎಂ ಕುಮಾರಸ್ವಾಮಿ ಅವರು ದೇವೆಗೌಡರ ಸಹವಾಸ ಬಿಟ್ಟು, ರಾಜೀನಾಮೆ ಕೊಟ್ಟು ಗುಡ್ಡಕ್ಕೆ ಹೋಗಬೇಕು. ಕುಮಾರಸ್ವಾಮಿ ತಂದೆ ಮಾತು ಕೇಳಿ ಹಾಳಾಗುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ಗುಡ್ಡಕ್ಕೆ ಸೇರೋದೊಂದೇ ಇದಕ್ಕೆ ಪರಿಹಾರ ಎಂದು ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ