Belagavi NewsBelgaum NewsKannada NewsKarnataka NewsLatestPolitics

*ಲೋಕಸಭಾ ಚುನಾವಣೆ: ಹೈಕಮಾಂಡ್ ನೀಡಿದ ಸೂಚನೆಯೇನು? ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಲು ತಯಾರಿ ನಡೆಸುವಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ನಗರದ ಕುಮಾರ ಗಂಧರ್ವ ರಂಗ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ನನಗೆ ಹೇಳಿಲ್ಲ. ಆದರೆ ಚುನಾವಣೆಯಲ್ಲಿ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಿಸಬೇಕು. ಆದ್ದರಿಂದ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕೆಂದು ಸಭೆಯಲ್ಲಿ ಎಲ್ಲರಿಗೂ ಸೂಚನೆ ನೀಡಿದ್ದಾರೆ ಎಂದರು.

ನಮ್ಮ‌ ಜಿಲ್ಲೆಯಲ್ಲಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಡ್ಯೂಟಿ. ಅದನ್ನು ಮಾಡುತ್ತೇವೆ. ಈಗಾಗಲೇ ಬೆಂಗಳೂರಿನಲ್ಲಿ ಒಂದು ಬಾರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆಯಾಗಿದೆ. ಎರಡನೇ ಬಾರಿ ಆದಷ್ಟು ಬೇಗ ಬೆಳಗಾವಿಯಲ್ಲಿ ಸಭೆ ಮಾಡಿ ಚರ್ಚೆ ಮಾಡುತ್ತೇವೆ ಎಂದರು.

ಹೈಕಮಾಂಡ್ ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಬೇಕೆಂದು ಸೂಚನೆ ನೀಡಿಲ್ಲ. ಆಕಾಂಕ್ಷಿ ಅಭ್ಯರ್ಥಿಗಳನ್ನು ಹುಡುಕಾಟ ನಡೆಸಬೇಕಿದೆ. ಹಾಲಿ ಹಾಗೂ ಮಾಜಿ ಸಚಿವರಿಗೆ ಸ್ಪರ್ಧೆ ಮಾಡಬೇಕೆಂದು ಎಲ್ಲಿಯೂ ಹೇಳಿಲ್ಲ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಿ ಅವರಿಗೆ ಅವಕಾಶ ಕೊಡುತ್ತೇವೆ. ವಿಧಾನಸಭಾ ‌ಚುನಾವಣೆಯ ಮಾದರಿಯಲ್ಲಿ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ. ಆದರೆ ಈ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಇದೆ ಎಂದರು.

ಉದ್ಯಮಬಾಗ ಪೊಲೀಸರು ವಿಕಲಚೇತನನ ಮೇಲೆ ಹಲ್ಲೆ ಮಾಡಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಹಲ್ಲೆ ಮಾಡಿದ ವಿಡಿಯೋ ನೋಡಿದ್ದೇನೆ. ಈ ಕುರಿತು ನಗರ ಪೊಲೀಸರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣದ ಬಗ್ಗೆ ಮಾಜಿ ಸಚಿವ ಆರಗ್ ಜ್ಞಾನೇಂದ್ರ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಇಂಥ ಹೇಳಿಕೆ ನೀಡುತ್ತಿರುತ್ತಾರೆ. ಆ ಹೇಳಿಕೆಯನ್ನು ಅವರು ವಾಪಸ್ಸು ಪಡೆದಿದ್ದಾರೆ. ಬಿಜೆಪಿಯವರು ಕ್ಷಮೆ ಕೇಳಿದ್ದಾರೆ. ಅದು ಮುಗಿದ ಹೋದ ಅಧ್ಯಾಯ. ಅದನ್ನು ಮುಂದುವರೆಸುವ ಅಗತ್ಯ ಇಲ್ಲ ಎಂದರು.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ವಿಚಾರವಾಗಿ, ಕಳೆದ 10 ವರ್ಷಗಳಿಂದ ಆಗದ ರಸ್ತೆ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ನಮ್ಮ ರಾಜ್ಯಕ್ಕೆ ಪರಿಹಾರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ದೆಹಲಿಗೆ ಮೂರು ಬಾರಿ ಹೋಗಿದ್ದು ಎರಡೂ ಸಲ ಲೋಕೋಪಯೋಗಿ ಇಲಾಖೆಯ ಕೆಲಸದ ನಿಮಿತ್ತ, ಮೊನ್ನೆ ‌ಹೋದ ಸಂದರ್ಭದಲ್ಲಿ ಇಲಾಖೆಯ ಸಭೆಯ ಜೊತೆಗೆ ರಾಜಕೀಯ ಚರ್ಚೆಯ ಸಭೆಯಲ್ಲಿಯೂ ಭಾಗವಹಿಸಿದ್ದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನಿಮ್ಮ ನಡುವೆ ಅಧಿಕಾರಿಗಳ ವರ್ಗಾವಣೆಯಲ್ಲಿ ಕೋಲ್ಡ್ ವಾರ್ ನಡೆಯುತ್ತಿರುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲ ಆ ಸೀಟು ರಾಜು ಸೇಠ್ ಅವರಿಗೆ ಬಿಟ್ಟಿದ್ದು. ನಮಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಯಾವುದೇ ಕೋಲ್ಡ್ ವಾರ್ ಇಲ್ಲ, ಅವರವರ ಕ್ಷೇತ್ರದದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟಿದ್ದು. ಅವರು‌ ಮೂರು ಪತ್ರ ಮೊದಲು ಕೊಟ್ಟಿರುತ್ತಾರೆ. ಅವರದ್ದು ಕೆಲಸ ಆಗುತ್ತದೆ. ಅಲ್ಲಿ ಆಗದಿದ್ದರೆ ನಮ್ಮ ಕಡೆ ಪತ್ರ ತೆಗೆದುಕೊಂಡು‌ ಹೋಗುತ್ತಾರೆ. ಇದಕ್ಕೆ ನಮ್ಮಿಬ್ಬರ ನಡುವೆ ಕೋಲ್ಡ್ ವಾರ ಇದೆ ಎನ್ನುವುದು ಸರಿಯಲ್ಲ ಎಂದರು.

ಗೃಹ ಜ್ಯೋತಿ ಸರಕಾರದ ಒಳ್ಳೆಯ ಯೋಜನೆ. ಈಗಾಗಲೇ ಜಾರಿಯಲ್ಲಿದೆ. ಇವತ್ತಿನಿಂದ ಅದರ ಲಾಭ ರಾಜ್ಯದ ಜನರಿಗೆ ದೊರಕಲಿದೆ. ಇದು ಬಹಳಷ್ಟು ಬಡವರಿಗೆ ಅನುಕೂಲವಾಗಲಿದೆ ಎಂದರು.

ಈ ವೇಳೆ ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button