
ಪ್ರಗತಿವಾಹಿನಿ ಸುದ್ದಿ: ಮದ್ದೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರಿಂದ ಲಾಠಿಚಾರ್ಜ್ ಗೆ ಒಳಗಾಗಿದ್ದ ಮಹಿಳೆ ಮೇಲೇಯೇ ಇದೀಗ ಎಫ್ ಐ ಆರ್ ದಾಖಲಿಸಲಾಗಿದೆ.
ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆ ಖಂಡಿಸಿ ಹಿಂದೂ ಪರ ಸಂಘಟನೆ, ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು.
ಈ ವೇಳೆ ಪ್ರತಿಭಟನೆಯಲ್ಲಿ ತೊಡಗಿದ್ದ ಮಹಿಳೆಯರ ಮೇಲೂ ಲಾಠಿ ಬೀಸಲಾಗಿತ್ತು. ಹೀಗೆ ಲಾಠಿ ಏಟು ತಿಂದಿದ್ದ ಮಹಿಳೆಯ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ.
ಮದ್ದೂರು ಠಾಣೆ ಪಿಐ ಶಿವಕುಮಾರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮದ್ದೂರು ಠಾಣೆಯಲ್ಲಿ ಮದ್ದೂರಿನ ಶಿವಪುರ ನಿವಾಸಿ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಸ್ಲಿಂರ ವಿರುದ್ಧ ಅವಹೇಳನಕಾರಿ ಹೇಳಿಕೆ, ಅನ್ಯಧರ್ಮದ ಬಗ್ಗೆ ಧಕ್ಕೆಯಾಗುವಂತೆ ಪದ ಬಳಕೆ, ಕೋಮುಗಳ ನಡುವೆ ವೈಮನಸ್ಸು ಉಂಟುಮಾಡುವ ಹೇಳಿಕೆ, ವೈರತ್ವ ಉತ್ತೇಜನ ನೀಡುವ ಆರೋಪದಡಿ ಕೇಸ್ ದಾಖಲಾಗಿದೆ. ಜ್ಯೋತಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸರ ವಿರುದ್ಧವೂ ಅಶ್ಲೀಲ ಪದ ಬಳಕೆ ಮಾಡಿರುವ ಆರೋಪವಿದೆ. ಇದರ ಬೆನ್ನಲ್ಲೇ ಇದ್ಗ ಎಫ್ಐಆರ್ ದಾಖಲಾಗಿದೆ.