Latest

ಸಮಾಜಕ್ಕೆ ಅಗತ್ಯವಿರುವ, ಸ್ವಾಭಿಮಾನದ ಬದುಕು ಕಲ್ಪಿಸಲು ಸರ್ಕಾರ ಬದ್ಧ; ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತುಳಿತಕ್ಕೆ ಒಳಪಟ್ಟ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಆತ್ಮಗೌರವ ,  ಆತ್ಮಸನ್ಮಾನ , ಸಮಾನ ಅವಕಾಶ ಹಾಗೂ ಸ್ವಾಭಿಮಾನದ ಬದುಕು ಕಲ್ಪಿಸಲು ಸರ್ಕಾರ  ಬದ್ಧವಾಗಿದೆ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಾಲ್ಮೀಕಿ ಜಯಂತಿಯ ಅಂಗವಾಗಿ ಇಂದು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಪರಿವರ್ತನೆಯ ಹರಿಕಾರ, ಶ್ರೇಷ್ಠ ಮಾನವತಾವಾದಿ, ರಾಮಾಯಣದ ರಚನಕಾರ, ಇಡೀ ಜಗತ್ತಿಗೆ ದಾರಿದೀಪವಾಗಿರುವ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಸರ್ಕಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ತೀರ್ಮಾನ ಮಾಡಿದ್ದು ಗುಲ್ಬರ್ಗಾದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಚಿವರಾದ ಶ್ರೀರಾಮುಲು, ಗೋವಿಂದ ಕಾರಜೋಳ ಹಾಗೂ  ನಾನು ಕೂಡ ಭಾಗವಹಿಸಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ಅಂದಿನಿಂದ ಇಂದಿನವರೆಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಾಡಿನಾದ್ಯಂತ ಅರ್ಥಪೂರ್ಣ ವಾಗಿ ಆಚರಿಸಲಾಗುತ್ತಿದೆ. ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಸರ್ಕಾರ, ಸಮಾಜ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಲು ಅಗತ್ಯವಿರುವ ಕಾರ್ಯಕ್ರಮಗಳನ್ನು  ನಾವು ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.

Home add -Advt

ಮಹರ್ಷಿ ವಾಲ್ಮೀಕಿಯವರ ತತ್ವ, ಆದರ್ಶಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲಾಗುವುದು:

ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ವಿಶ್ವದ ಹತ್ತು ಶ್ರೇಷ್ಠ ಗ್ರಂಥಗಳಲ್ಲಿ ಶ್ರೇಷ್ಠವಾಗಿದೆ. ರಾಮಾಯಣ ರಚಿಸಿ ಜೀವನದ ಮಾರ್ಗ ಮತ್ತು ಸಾರವನ್ನು ವಾಲ್ಮೀಕಿ ಕೊಟ್ಟಿದ್ದಾರೆ. ರಾಮಾಯಣದ ಎಲ್ಲಾ ಪ್ರಸಂಗಗಳು ಅನುಕರಣೀಯ. ಮುಖ್ಯಮಂತ್ರಿಯಾಗಿ ಮಹರ್ಷಿ ವಾಲ್ಮೀಕಿಯವರ ತತ್ವ, ಆದರ್ಶಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬಿ‌. ಶ್ರೀರಾಮುಲು, ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಭೋವಿ ಪೀಠದ ಶ್ರೀ  ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮತ್ತಿತರರು ಹಾಜರಿದ್ದರು.

https://pragati.taskdun.com/latest/gandadaguditrailerpm-moditweet/

Related Articles

Back to top button