*ಬೃಹತ್ ರಕ್ತದಾನ ಶಿಬಿರ: ಜಿಲ್ಲೆಯಲ್ಲಿ ಮೂರನೇ ಅತಿ ಹೆಚ್ಚು ರಕ್ತ ಸಂಗ್ರಹಿಸಿದ ಕೀರ್ತಿ ಖಾನಾಪೂರಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಖಾನಾಪೂರ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ “ಗುರು ಶಿಕ್ಷಕ ನಮನ-ರಕ್ತದಾನ, ಜೀವದಾನ” ಎಂಬ ಸಂದೇಶದೊಂದಿಗೆ ಖಾನಾಪೂರ ಪಟ್ಟಣ ಪಂಚಾಯತಿಯ ಮಂಗಲ ಕಾರ್ಯಾಲಯ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ನಂದಗಡದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಖಾನಾಪೂರ ಮತಕ್ಷೇತ್ರದ ಶಾಸಕರಾದ ವಿಠ್ಠಲ ಹಲಗೇಕರ ಅವರು ಶಿಬಿರಕ್ಕೆ ಚಾಲನೆ ನೀಡಿ ರಕ್ತದಾನಿಗಳಿಗೆ ಪ್ರೋತ್ಸಾಹ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿ–ಸಿಬ್ಬಂದಿ, ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ರಕ್ತದಾನ ಜೀವ ಉಳಿಸುವ ಮಹತ್ಕಾರ್ಯ: ಶಾಸಕ ವಿಠ್ಠಲ ಹಲಗೇಕರ
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ, “ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಈ ವಿಶೇಷ ಸಂದರ್ಭದಲ್ಲಿ ಸಮಾಜದ ಆರೋಗ್ಯದ ಕಡೆಗೂ ಗಮನಹರಿಸುವ ಉದ್ದೇಶದಿಂದ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯವಾಗಿದೆ.‘ರಕ್ತದಾನ–ಜೀವದಾನ’ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು,” ಎಂದರು.
“ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ರಕ್ತ ದೊರೆಯದಿದ್ದರೆ ಅಮೂಲ್ಯ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ರಕ್ತದಾನ ಮಾಡಲು ಅರ್ಹರಾಗಿರುವ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಪಾಲ್ಗೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ,” ಎಂದು ಹೇಳಿದರು.
“ಇಂದು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ರಕ್ತದಾನ ಮಾಡಿದ ಪ್ರತಿಯೊಬ್ಬ ದಾನಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಮಾನವೀಯ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ,” ಎಂದು ಅವರು ಆಶಿಸಿದರು.
ಸಿಇಒ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರ
ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, ರಕ್ತದ ಕೊರತೆಯಿಂದ ಯಾವುದೇ ವ್ಯಕ್ತಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬಾರದಂತೆ ನಿರಂತರ ರಕ್ತ ಸಂಗ್ರಹಣೆ ಮಾಡುವುದು ಹಾಗೂ ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ ತಿಳಿಸಿದರು.
ಖಾನಾಪೂರದಲ್ಲಿ 434 ಯೂನಿಟ್ ರಕ್ತ ಸಂಗ್ರಹಣೆ
ಖಾನಾಪೂರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 434 ಯೂನಿಟ್ ರಕ್ತ ಸಂಗ್ರಹಣೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಮೂರನೇ ಅತಿ ಹೆಚ್ಚು ರಕ್ತ ಸಂಗ್ರಹಿಸಿದ ತಾಲೂಕು ಎಂಬ ಕೀರ್ತಿಗೆ ಖಾನಾಪೂರ ಪಾತ್ರವಾಗಿದೆ.
ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆ
ರಕ್ತದಾನ ಶಿಬಿರದಲ್ಲಿ ತಾಲೂಕಿನ ಮರಾಠ ಮಂಡಳ ಕಾಲೇಜಿನ ವಿದ್ಯಾರ್ಥಿಗಳು, ಶಾಂತಿ ನಿಕೇತನ ಶಾಲೆಯ ವಿದ್ಯಾರ್ಥಿಗಳು ಹಾಗೂ ಬಿಬಿಎ ವಿದ್ಯಾರ್ಥಿಗಳು, ಭಾರತೀಯ ಸೇವಾದಳ, ಕನ್ನಡ ರಕ್ಷಣಾ ವೇದಿಕೆ, ಲಯನ್ಸ್ ಕ್ಲಬ್ ಸದಸ್ಯರು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ರಕ್ತದಾನ ಮಾಡಿದರು.
ಶಕ್ತಿನಗರ ಡಿಗ್ರಿ ಕಾಲೇಜಿನ ವಿದ್ಯಾರ್ಥಿ ಆಸೀಫ್ ಇನಾಮದಾರ ಮಾತನಾಡಿ, “ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತೋಷದ ಹಾಗೂ ಉತ್ತಮ ಅನುಭವವಾಗಿದೆ. ಶಿಬಿರವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು, ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಕಾಳಜಿ ವಹಿಸಲಾಗಿದೆ. ನಾವು ನೀಡುವ ಒಂದು ಬಾರಿ ರಕ್ತದಾನವು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಬಹುದು. ಆದ್ದರಿಂದ ರಕ್ತದಾನ ಮಾಡಲು ಅರ್ಹರಾಗಿರುವ ಪ್ರತಿಯೊಬ್ಬರೂ ಮುಂದೆ ಬಂದು ಈ ಮಹತ್ಕಾರ್ಯದಲ್ಲಿ ಭಾಗವಹಿಸಬೇಕು,” ಎಂದು ಮನವಿ ಮಾಡಿದರು.
ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ನಬೀಬ ಅಹ್ಮದ ಶೇಖ ಮಾತನಾಡಿ, “ಇಂದಿನ ಶಿಬಿರದಲ್ಲಿ ನಮ್ಮ ತಂಡದಿಂದ ಸುಮಾರು 35 ಮಂದಿ ರಕ್ತದಾನ ಮಾಡಿದ್ದಾರೆ. ನಾನು ಇದುವರೆಗೆ 56 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದಾನ ಕೇವಲ ದಾನವಲ್ಲ, ಅದು ಜೀವದಾನ. ನಮ್ಮ ಒಂದು ಯೂನಿಟ್ ರಕ್ತವು ಅಗತ್ಯವಿರುವ ಸಂದರ್ಭದಲ್ಲಿ ಮತ್ತೊಬ್ಬರ ಜೀವವನ್ನು ಉಳಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಮುಂದೆ ಬಂದು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು,” ಎಂದು ಕರೆ ನೀಡಿದರು.
ಶಿಬಿರದ ಉಸ್ತುವಾರಿ ಅಧಿಕಾರಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಬಿ. ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮಂಜುನಾಥ ಹತ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ ಕಿವಡಸನ್ನವರ, ತಾಲ್ಲೂಕ ಅಕ್ಷರದಾಸೋಹ ಅಧಿಕಾರಿ ವಿನಾಯಕ ಜಕಾತಿ, ಸಿ.ಡಿ.ಪಿ.ಒ ವಿಕ್ರಮ ಕೆ.ಬಿ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಮನೋಹರ ದಾದಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ರಕ್ತದಾನ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ರಕ್ತದಾನಿಗಳು ಹಾಗೂ ಸಾರ್ವಜನಿಕರಿಗೆ ತಾಲೂಕು ಆಡಳಿತದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.


