Latest

ಶಾಲಾ ವೇಳಾಪಟ್ಟಿ ಪರಿಷ್ಕರಣೆಗೆ ಶಾಸಕ ಸಿ.ಬಿ. ಸುರೇಶಬಾಬು ಆಗ್ರಹ

ಪ್ರಗತಿವಾಹಿನಿ ಸುದ್ದಿ, ಚಿಕ್ಕನಾಯಕನಹಳ್ಳಿ (ತುಮಕೂರು ಜಿಲ್ಲೆ): ಶಾಲೆಗಳ ವೇಳಾಪಟ್ಟಿಯನ್ನು ಬೆಳಗ್ಗೆ 10.20 ರಿಂದ ಸಂಜೆ 4.30 ರವರೆಗೆ ಪರಿಷ್ಕರಿಸುವಂತೆ ಆಗ್ರಹಿಸಿ ಶಾಸಕ ಸಿ.ಬಿ. ಸುರೇಶಬಾಬು ಅವರು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಸ್ತುತ ಬೆಳಗ್ಗೆ 9.30ರಿಂದ 10 ಗಂಟೆವರೆಗೆ ಸ್ವಚ್ಛತೆ, ಪ್ರಾರ್ಥನೆ, ಕ್ಷೀರಭಾಗ್ಯ ಯೋಜನೆ, 10ರಿಂದ ಸಂಜೆ 4.20ರವರೆಗೆ ದೈನಂದಿನ ತರಗತಿ ನಿರ್ವಹಣೆ ಮಾಡುವಂತೆ ಸಲಹಾತ್ಮಕ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಆದರೆ ಬೆಳಗ್ಗೆ 9.30ಕ್ಕೆ ಮಕ್ಕಳು ಶಾಲೆಗೆ ಹಾಜರಾಗಲು ತೊಂದರೆಯಾಗುತ್ತಿದೆ. ಸಕಾಲಕ್ಕೆ ಶಾಲೆ ತಲುಪಲಾಗದ ಕಾರಣ ಕೆಲ ಮಕ್ಕಳು ಉಪಾಹಾರ ಕೂಡ ಸೇವಿಸದೆ ಶಾಲೆಗೆ ಬರುತ್ತಿದ್ದಾರೆ. ಕ್ಷೀರಭಾಗ್ಯ ಯೋಜನೆಗೂ ಇದರಿಂದ ತೊಂದರೆ ಉಂಟಾಗಿದೆ. ಈ ವೇಳಾಪಟ್ಟಿಯನ್ನು ಕಾರ್ಯರೂಪಕ್ಕೆ ತರುವುದು ಕಷ್ಟಕರವಾಗಿದ್ದು 20 ನಿಮಿಷದ ಬಿಡುವಿನ ಅಗತ್ಯವಿರುವುದಿಲ್ಲ. ಹೀಗಾಗಿ ಬೆಳಗ್ಗೆ 10.20ರಿಂದ ಸಂಜೆ 4.30ರವರೆಗೆ ಶಾಲಾ ವೇಳಾಪಟ್ಟಿ ನಿಗದಿಗೊಳಿಸಿದರೆ ಅನುಕೂಲಕರವಾಗಲಿದೆ ಎಂದು ಸುರೇಶಬಾಬು ಸಲಹೆ ನೀಡಿದ್ದಾರೆ.

ಪಟ್ಟಣದ ಹೃದಯಭಾಗದಲ್ಲಿರುವ ಗುರುಭವನ ಕಟ್ಟಡ ಶಿಥಿಲವಾಗಿದ್ದು, ಅದನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಸುಸಜ್ಜಿತವಾದ ಶಿಕ್ಷಕರ ಭವನ ನಿರ್ಮಾಣಕ್ಕೆ ಸುರೇಶಬಾಬು ಅವರು ಸಲಹೆ ನೀಡಿದ್ದಾರೆ.

ಈ ಕಟ್ಟಡ ನಿರ್ಮಾಣದಿಂದ ಶಿಕ್ಷಕರ ಹಾಗೂ ನೌಕರರ ಕುಟುಂಬದ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಪಕ್ಕದಲ್ಲಿ ಆರು ಮಳಿಗೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಿ ಸಂಘದ ಆರ್ಥಿಕ ಸಬಲತೆಗೂ ಅನುಕೂಲ ಮಾಡಿಕೊಡುವಂತೆ ಸಿ.ಬಿ. ಸುರೇಶಬಾಬು ಅವರು ಸಚಿವ ಎಸ್. ಮಧು ಬಂಗಾರಪ್ಪ ಻ವರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button