
ಪ್ರಗತಿವಾಹಿನಿ ಸುದ್ದಿ : ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಫೂಟ್‌ವೇರ್ ಉತ್ಪಾದಕ ವಲಯಗಳಿಗೆ ಬಜೆಟ್ ಒತ್ತು ನೀಡಿದ್ದು, ಬೆಂಗಳೂರು ಸಮೀಪ ಶೀಘ್ರವೇ ಮೊಬೈಲ್ ಉತ್ಪಾದನಾ ಕಂಪನಿ ಶುರುವಾಗಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಿಹಿ ಸುದ್ದಿ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಬೈಲ್ ಉತ್ಪಾದನಾ ಕಂಪನಿ ಆರಂಭವಾದಲ್ಲಿ 40 ಸಾವಿರ ಉದ್ಯೋಗ ಸೃಷ್ಟಿಯಾಗುವ ಗುರಿ ಇದೆ. ಈ ಕುರಿತು ತಾವು ಉತ್ಪಾದನಾ ಕಂಪನಿಗೆ ಭೇಟಿ ಮಾಡಿ ಚರ್ಚಿಸುವೆ. ಉದ್ಯೋಗ ಸೃಷ್ಟಿಯಾಗುವುದೇ ಉತ್ಪಾದನಾ ವಲಯದಿಂದ. ಹೀಗಾಗಿ ಕೇಂದ್ರ ಬಜೆಟ್‌ನಲ್ಲಿ ನಾವು ಉತ್ಪಾದನಾ ವಲಯಕ್ಕೂ ಆದ್ಯತೆ ನೀಡಿದ್ದೇವೆ ಎಂದರು.
ಯುಪಿಎ ಅವಧಿಯಲ್ಲಿ ರೂ.850 ಕೋಟಿ ಕರ್ನಾಟಕ ರೈಲ್ವೇಗೆ ಅನುದಾನ ನೀಡಿದ್ದರು. ಆದರೆ ನಮ್ಮ ಸರ್ಕಾರ ರೂ.7,564 ಕೋಟಿ ಅನುದಾನ ನೀಡಿದೆ. ರೂ.51,479 ಕೋಟಿಯಷ್ಟು ರೈಲ್ವೇ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಅಮೃತ್ ಸ್ಟೇಷನ್ ಯೋಜನೆಯಡಿ 61 ರೈಲ್ವೇ ನಿಲ್ದಾಣಗಳ ಮರು ನಿರ್ಮಾಣ ಆಗಿದೆ. 10 ವಂದೇ ಭಾರತ್ ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿದ್ದು ಇನ್ನಷ್ಟು ಬರಲಿವೆ ಎಂದು ಮಾಹಿತಿ ನೀಡಿದರು.
ಕಳೆದ 60 ವರ್ಷದಲ್ಲಿ ಆಗದಿರುವ ಕೆಲಸ ಪ್ರಧಾನಿ ಮೋದಿ ಅವಧಿಯಲ್ಲಾಗಿದೆ. ಒಂದು ಮತ್ತು ಎರಡನೇ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ದೇಶದ ಯಾವ ಭಾಗಕ್ಕೆ ಹೋದರೂ ಕಾಣುತ್ತದೆ ಎಂದು ಹೊಗಳಿದರು.