LatestUncategorized

ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ; ಸಂಸದೆ ಸುಮಲತಾ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮಂಡ್ಯ ಜಿಲ್ಲೆಗೆ ಬದಲಾವಣೆಯ ಅಗತ್ಯವಿದೆ. ಜಿಲ್ಲೆಯ ರಾಜಕಾರಣದಲ್ಲಿ ಸ್ವಚ್ಛತೆಯ ಅಗತ್ಯವಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಬದಲಾವಣೆ ತರಲು ನನಗೆ ಶಕ್ತಿ ಬೇಕಿದೆ. ಹಾಗಾಗಿ ನಾನು ಒಂದು ಹೆಜ್ಜೆ ಮುಂದೆ ಇಟ್ಟಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಮಂಡ್ಯದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದೆ ಸುಮಲತಾ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಉತ್ತಮ ಕೆಲಸಗಳು ನಡೆಯುತ್ತಿವೆ. ಪ್ರಪಂಚದಾದ್ಯಂತ ನಾವು ಭಾರತೀಯರು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತೆ, ತಲೆ ಎತ್ತಿ ನಿಲ್ಲುವಂತೆ ಮಾಡುತ್ತಿರುವುದು ಪ್ರಧಾನಿ ಮೋದಿಯವರು. ದೇಶದಲ್ಲಿ ಹಲವಾರು ಬದಲಾವಣೆ, ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತಿರುವುದು ಪ್ರಧಾನಿ ಮೋದಿ ನಾಯಕತ್ವದಲ್ಲಿ . ಇದನ್ನು ಕಳೆದ ನಾಲ್ಕು ವರ್ಷಗಳಿಂದ ಸತ: ನಾನು ನೋಡುತ್ತಿದ್ದೇನೆ. ಮಂಡ್ಯ ಜಿಲ್ಲೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲು ನನಗೆ ಕೇಂದ್ರ ಸರ್ಕಾರ ಸಾಕಷ್ಟು ಸಹಕಾರ ನೀಡಿದೆ. ಪಕ್ಷೇತರ ಸಂಸದೆಯಾಗಿದ್ದರೂ ಸಾಕಷ್ಟು ಅನುದಾನಗಳನ್ನು ಕೇಂದ್ರ ಸರ್ಕಾರ ನೀಡಿದೆ. ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿದೆ ಎಂದು ಶ್ಲಾಘಿಸಿದರು.

ಈ ಮಾರ್ಚ್ ತಿಂಗಳಿಗೆ ನಾನು ರಾಜಕಾರಣಕ್ಕೆ ಬಂದು ನಾಲ್ಕು ವರ್ಷವಾಯಿತು. ಸ್ವಾರ್ಥಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ, ಮಂಡ್ಯ ಜಿಲ್ಲೆಯ ಜನತೆಗಾಗಿ, ಅಂಬರೀಶ್ ಅಭಿಮಾನಿಗಳಿಗಾಗಿ ಅವರ ಒತ್ತಾಸೆಯಂತೆ ರಾಜಕೀಯಕ್ಕೆ ಬಂದೆ. ಯಾವುದೂ ಅನಿವಾರ್ಯವಲ್ಲ, ಶಾಶ್ವತವೂ ಅಲ್ಲ. ಸಂಸದೆಯಾಗಿ ಜಿಲ್ಲೆಯ ಅಭಿವೃದ್ದಿಗಾಗಿ ಪ್ರಾಮಣಿಕ ಪ್ರಯತ್ನ, ಕೆಲಸಗಳನ್ನು ಮಾಡಿದ್ದೇನೆ. ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸವಾಲುಗಳನ್ನು, ನಿಂದನೆ, ಆರೋಪಗಳನ್ನು ಎದುರಿಸಿದ್ದೇನೆ. ಆದರೂ ಯಾವುದಕ್ಕೂ ಹೆದರದೇ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಎಂದು ವಿವರಿಸಿದರು.

ಜಿಲ್ಲೆಯ ಭ್ಯವಿಷ್ಯ ದೃಷ್ಟಿಯಿಂದ, ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ನಾನು ಕೆಲ ನಿರ್ಧಾರವನ್ನು ಮಾಡಲೇಬೇಕಾದ ಸಮಯ ಬಂದಿದೆ. ಆ ನಿಟ್ಟಿನಲ್ಲಿ ಇಂದಿನಿಂದ ನನ್ನ ಸಂಪೂರ್ಣ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಘೋಷಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ರಾಜ್ಯ ರಾಜಕೀಯಕ್ಕೆ ಬರುವ ಬಗ್ಗೆ ನಾನು ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಬಿಜೆಪಿಗೆ ಬೆಂಬಲವನ್ನಷ್ಟೇ ಸುಮಲತಾ ಘೋಷಣೆ ಮಾಡಿದ್ದು, ಪಕ್ಷ ಸೇರ್ಪಡೆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಈ ಮೂಲಕ ಇಂದಿನ ಸುದ್ದಿಗೋಷ್ಠಿ ಬಿಜೆಪಿಗೆ ಬೆಂಬಲ ಗೋಷಣೆಗಷ್ಟೇ ಸೀಮಿತವಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button