Politics

*ನಾನು ಕೇಳಿದ ಪ್ರಶ್ನೆಗಳಿಗೆ ಇನ್ನೂ ಉತ್ತರ ಬಂದಿಲ್ಲ; ಸಿಎಂ ವಿರುದ್ಧ ಕಿಡಿಕಾರಿದ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ: ಮೂಡಾ ಭೂ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಾನು ಕೇಳಿದ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಇನ್ನು ಯಾವುದೇ ಉತ್ತರ ಬಂದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, 1.) For the argument sake, ತಮ್ಮ ಪತ್ನಿಗೆ ಸೇರಿದ ಭೂಮಿಯನ್ನ ಮೂಡಾ ಅಭಿವೃದ್ಧಿ ಪಡಿಸಿತು ಅಂದುಕೊಳ್ಳೋಣ. ಅದಕ್ಕೆ ಪರಿಹಾರ ರೂಪದಲ್ಲಿ ಸಮಾನಾಂತರ ಬಡಾವಣೆಯಲ್ಲೇ ಜಮೀನು ಅಥವಾ ನಿವೇಶನ ಪಡೆದುಕೊಳ್ಳಬೇಕು ಎಂಬುದು ಕಾನೂನು ತಜ್ಞರಾದ ತಮಗೆ ತಿಳಿದಿರಲಿಲ್ಲವೇ? ಅಥವಾ ಗೊತ್ತಿದ್ದೂ ಸುಮ್ಮನಿದ್ದರೇ? ಸಿದ್ಧರಾಮನಹುಂಡಿಯಲ್ಲಿ ಜಮೀನು ಕೊಟ್ಟು ಬದಲಿಗೆ ಅಂಬಾ ವಿಲಾಸ ಅರಮನೆಯನ್ನ ಬರೆಸಿಕೊಂಡಂತಾಯ್ತು ತಮ್ಮ ಕಥೆ! ಅಲ್ಲವೇ ಮುಖ್ಯಮಂತ್ರಿಗಳೇ?

2.) ಇಂತಹ ಜಾಗದಲ್ಲೇ ನಿವೇಶನ ಕೊಡಿ ಎಂದು ತಾವು ಕೇಳಿಲ್ಲ, ಮೂಡಾದವರು ತಾವಾಗಿಯೇ ಕೊಟ್ಟಿದ್ದಾರೆ ಎಂದು ತಮ್ಮ ಭ್ರಷ್ಟಾಚಾರವನ್ನ ಸಮರ್ಥನೆ ಮಾಡಿಕೊಳ್ಳುತ್ತೀರಿ. ಹಾಗಾದರೆ ಇಷ್ಟು ಸುದೀರ್ಘ ಆಡಳಿತದ ಅನುಭವ, ಕಾನೂನಿನ ಜ್ಞಾನ ಇರುವ ತಾವು ನಿಯಮ ಬಾಹಿರವಾಗಿ ನಿವೇಶನ ಕೊಡುವ ಮೂಲಕ ತಪ್ಪು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ಏಕೆ ಎಚ್ಚರಿಕೆ ನೀಡಲಿಲ್ಲ?

3.) ನಿಯಮ ಬಾಹಿರವಾಗಿ ಹಂಚಿಕೆಯಾಗಿರುವು ನಿವೇಶನಗಳು ಬೇಡ ಎಂದು ನಿರಾಕರಿಸಬಹುದಿತ್ತಲ್ಲ? ಏಕೆ ನಿರಾಕರಿಸಲಿಲ್ಲ? ತಾವು ನಿಜವಾಗಿಯೂ ಪ್ರಾಮಾಣಿಕರೇ ಆಗಿದ್ದರೆ, ಕಡೇ ಪಕ್ಷ ಹಗರಣ ಬಯಲಿಗೆ ಬಂದ ಮೇಲಾದರೂ ನಿವೇಶನ ಹಿಂತಿರುಗಿಸ ಬಹುದಿತ್ತಲ್ಲ? ನಿವೇಶನ ಹಿಂತಿರುಗಿಸುವುದು ದೂರದ ಮಾತು, ಬದಲಿಗೆ ಮೂಡಾದವರು ತಮಗೆ ₹60 ಕೋಟಿ ಕೊಡಬೇಕು ಅನ್ನುತ್ತೀರಲ್ಲ, ತಮ್ಮದು ಇನ್ನೆಂತಹ ಭಂಡ ಬಾಳು ಇರಬೇಡ?

4.) ತಮ್ಮ ಪತ್ನಿಗೆ 2010ರಲ್ಲೇ ಸದರಿ ಜಮೀನು ತವರು ಮನೆಯಿಂದ ಗಿಫ್ಟ್ ಡೀಡ್ (ದಾನ ಪತ್ರದ) ಮೂಲಕ ಸಿಕ್ಕಿತ್ತು ಅಲ್ಲವೇ? ಹಾಗದರೆ 2013ರ ವಿಧಾನಸಭಾ ಚುನಾವಣೆ ವೇಳೆ ತಮ್ಮ ಅಫಿಡವಿಟ್ ನಲ್ಲಿ ಇದನ್ನ ಏಕೆ ಉಲ್ಲೇಖ ಮಾಡಲಿಲ್ಲ?

5.) ಚುನಾವಣಾ ಅಫಿಡವಿಟ್ ನಲ್ಲಿ ತಮ್ಮ ಕುಟುಂಬದ ಆಸ್ತಿ ಮುಚ್ಚಿಟ್ಟು ತಪ್ಪು ಮಾಹಿತಿ ನೀಡಿರುವುದು ಕಾನೂನು ಉಲ್ಲಂಘನೆ ಅಲ್ಲವೇ ಸಿಎಂ ಸಿದ್ದರಾಮಯ್ಯನವರೇ? ಸುಳ್ಳು ಮಾಹಿತಿ ನೀಡುವುದು ಮತದಾರರನ್ನ ದಿಕ್ಕು ತಪ್ಪಿಸುವ ಕೆಲಸ ಅಲ್ಲವೇ ಸಿಎಂ ಸಿದ್ದರಾಮಯ್ಯನವರೇ? ಚುನಾವಣೆಗೂ ಮುನ್ನವೇ ಎಲೆಕ್ಷನ್ ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಿರುವ ತಮಗೆ, ಸತ್ಯದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿ ಸುಳ್ಳು ಹೇಳುವ ತಮಗೆ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ ಸಿದ್ದರಾಮಯ್ಯನವರೇ? ಉತ್ತರ ಕೊಡಿ ಎಂದು ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button