ಪ್ರಗತಿವಾಹಿನಿ ಸುದ್ದಿ : ಆರ್‌ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ನಡೆದಿದ್ದ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಲೇವಡಿ ಮಾಡಿದ್ದು ಘಟನೆಯ ವಿಡಿಯೋ ನೋಡಿದ್ದೇನೆ. ಅದರಲ್ಲಿ ಮುನಿರತ್ನ ಒಳ್ಳೆಯ ನಟನೆ ಮಾಡಿದ್ದಾರೆ ಎಂದು ಕಿಚಾಯಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುನಿರತ್ನ ತಮ್ಮ ಬೆಂಬಲಿಗರೊಂದಿಗೆ ನಡೆದುಕೊಂಡು ಬರುತ್ತಿದ್ದಾಗ, ಆ್ಯಸಿಡ್ ದಾಳಿ ಎನ್ನುತ್ತಿದ್ದಂತೆ 3 ಸೆಕೆಂಡ್ ಗ್ಯಾಪ್‌ನಲ್ಲೇ ಮೊಟ್ಟೆ ದಾಳಿಯಾಗಿದೆ. ವಿಡಿಯೋದಲ್ಲಿ ನಾನು ಇದನ್ನು ಸ್ಪಷ್ಟವಾಗಿ ನೋಡಿದ್ದೇನೆ. ನಿರ್ಮಾಪಕರು ಆಗಿರುವ ಮುನಿರತ್ನ ಒಳ್ಳೆಯ ನಟನೆ ಕೂಡ ಮಾಡಿದ್ದಾರೆ. ವಿಡಿಯೋ ನೋಡಿದ ಮೇಲೆ ನನಗೆ ಅರ್ಥವಾಯ್ತು, ಆಗಾಗ ಸಿನಿಮಾ ಸ್ಕ್ರಿಪ್ಟ್ ಕೂಡ ಬರೀತಿನಿ ಅಂತಾ ಮುನಿರತ್ನ ಹೇಳುತ್ತಿದ್ದರು. ಕಥೆಯನ್ನೂ ರೀರೈಟ್ ಮಾಡುತ್ತೇನೆ ಎನ್ನುತ್ತಿದ್ದರು. ಮೊಟ್ಟೆ ದಾಳಿ ಕಥೆಯೂ ಹಾಗೇ ಆಗಿರಬಹುದು ಎಂದರು.
ಇನ್ನು ಮೊಟ್ಟೆ ದಾಳಿ ನಂತರದಲ್ಲಿ ಮುನಿರತ್ನ ತಮ್ಮ ಹತ್ಯೆಗೆ ಸಂಚು ನಡೆದಿದೆ. ಮೊಟ್ಟೆ ದಾಳಿ ಹಿಂದೆ ಡಿ.ಕೆ ಸಹೋದರರು, ಆರ್ ಆರ್ ನಗರದ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಕೆಲ ಗೂಂಡಾಗಳ ಕೈವಾಡವಿದೆ ಎಂದು ಆರೋಪಿಸಿದ್ದರು. ಮೊಟ್ಟೆ ದಾಳಿಗೆ ಒಳಗಾಗಿದ್ದ ಮುನಿರತ್ನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರಹಸನವೂ ನಡೆದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ