*ಗ್ರೇಟರ್ ಮೈಸೂರಿಗೆ ಹೊಸ ರೂಪ, ದಸರಾಕ್ಕೂ ಹೊಸ ಸ್ಪರ್ಶ: ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಬಹುದಿನಗಳಿಂದ ಚರ್ಚೆಯಲ್ಲಿರುವ ಗ್ರೇಟರ್ ಮೈಸೂರು ಯೋಜನೆಗೆ ಹೊಸ ರೂಪ ನೀಡುವ ಜತೆಗೆ, ವಿಶ್ವವಿಖ್ಯಾತ ಮೈಸೂರು ದಸರಾಕ್ಕೂ ಹೊಸ ಆಲೋಚನೆ, ಶಿಸ್ತು ಮತ್ತು ಅಂತರರಾಷ್ಟ್ರೀಯ ಆಕರ್ಷಣೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮೈಸೂರಿನ ಓವೆಲ್ ಮೈದಾನದಲ್ಲಿ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
“ಗ್ರೇಟರ್ ಮೈಸೂರು ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಶೀಘ್ರವೇ ಪ್ರತ್ಯೇಕ ಸಭೆ ನಡೆಸಲಾಗುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಅಭಿವೃದ್ಧಿಗೆ ನೀಡಿದ್ದ ಆಲೋಚನೆ, ಮಾರ್ಗದರ್ಶನ ಮತ್ತು ಯೋಜನೆಗಳಿಗೆ ಹೊಸ ರೂಪ ನೀಡಿ ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು. ಮೈಸೂರಿನ ಅಭಿವೃದ್ಧಿಗೆ ನೀಡಿದ್ದ ಭರವಸೆಗಳನ್ನೂ ಈಡೇರಿಸುವ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದರು.
ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಐದು ನಗರಗಳ ಅಭಿವೃದ್ಧಿ
“ಬೆಂಗಳೂರು ನಗರದ ಮೇಲಿನ ಜನದಟ್ಟಣೆ ಹಾಗೂ ಸಂಚಾರದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಸೇರಿದಂತೆ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಮತ್ತಿತರ ನಗರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಚಿಂತನೆ ಇದೆ. ಉದ್ಯೋಗ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಕರ್ಯಗಳಿಗೆ ಉತ್ತೇಜನ ನೀಡಿ ಜನರು ಉದ್ಯೋಗಕ್ಕಾಗಿ ಬೆಂಗಳೂರಿನತ್ತ ವಲಸೆ ಬರುವ ಪರಿಸ್ಥಿತಿ ಕಡಿಮೆ ಮಾಡಬೇಕು” ಎಂದರು.
“ರಾಜ್ಯದ ಎಲ್ಲ ನಗರಗಳು ಹಾಗೂ ಪಟ್ಟಣಗಳ ಹೊರವಲಯದಲ್ಲಿ ಪ್ರತ್ಯೇಕ ರಿಂಗ್ ರೋಡ್ ಗಳನ್ನು ನಿರ್ಮಿಸುವ ಕುರಿತು ಈಗಾಗಲೇ ಸಹಿ ಮಾಡಲಾಗಿದೆ. ನಗರದೊಳಗೆ ಹೊರಗಿನ ವಾಹನಗಳು ಪ್ರವೇಶಿಸಿ ಸಂಚಾರ ದಟ್ಟಣೆ ಉಂಟುಮಾಡುವುದನ್ನು ತಪ್ಪಿಸುವುದು ಇದರ ಉದ್ದೇಶ ಎಂದು ಹೇಳಿದರು.
ಮೈಸೂರು–ಬೆಂಗಳೂರು ನಡುವೆ ಪ್ರಯಾಣದ ಅವಧಿ ಕಡಿಮೆಯಾಗಿದ್ದರೂ, ಕೆಂಗೇರಿಯಿಂದ ನಗರ ಪ್ರವೇಶಿಸುವಾಗ ಮತ್ತೆ ಹೆಚ್ಚಿನ ಸಮಯ ವ್ಯಯವಾಗುತ್ತಿದೆ. ಈ ಸಮಸ್ಯೆ ಬಗೆಹರಿಸುವ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಹಲವು ಶಾಸಕರು ಈ ವಿಷಯವನ್ನು ತಮ್ಮ ಗಮನಕ್ಕೂ ತಂದಿದ್ದಾರೆ” ಎಂದು ತಿಳಿಸಿದರು.
ದಸರಾಕ್ಕೆ ಹೊಸ ರೂಪ; ‘ರಿಪೀಟ್’ ಕಲಾವಿದರಿಗೆ ಬ್ರೇಕ್
“ದಸರಾ ಆಚರಣೆಯಲ್ಲಿ ಹೊಸತನ, ಶಿಸ್ತು ಹಾಗೂ ಅಂತರರಾಷ್ಟ್ರೀಯ ಮಟ್ಟದ ಆಕರ್ಷಣೆ ತರಲು ಸರ್ಕಾರ ಮುಂದಾಗಿದೆ. ಪ್ರತಿವರ್ಷ ಅದೇ ಕಲಾವಿದರು ಹಾಗೂ ಅದೇ ಕಾರ್ಯಕ್ರಮಗಳನ್ನು ಪುನರಾವರ್ತಿಸುವ ಬದಲು ಹೊಸ ಕಲಾವಿದರು ಮತ್ತು ಹೊಸ ಪರಿಕಲ್ಪನೆಗಳಿಗೆ ಅವಕಾಶ ನೀಡುವ ಚಿಂತನೆ ಇದೆ. ಒಂದೇ ಕಲಾ ಪ್ರಕಾರದ ಅನೇಕ ತಂಡಗಳನ್ನು ಪುನರಾವರ್ತಿಸುವ ಬದಲು, ಪ್ರತಿ ಕಲಾ ಪ್ರಕಾರಕ್ಕೂ ಸೂಕ್ತ ಸಂಖ್ಯೆಯ ಕಲಾವಿದರನ್ನು ಒಳಗೊಂಡ ಶಿಸ್ತಿನ ತಂಡ ರಚಿಸುವ ಉದ್ದೇಶವಿದೆ” ಎಂದರು.
“ದಸರಾ ಮೆರವಣಿಗೆಯಲ್ಲಿ ಸೇನೆ, ವಾಯುಪಡೆ ಸೇರಿದಂತೆ ರಾಜ್ಯದಲ್ಲಿರುವ ವಿವಿಧ ರಕ್ಷಣಾ ಪಡೆಗಳ ಸಿಬ್ಬಂದಿ ಭಾಗವಹಿಸುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಮೆರವಣಿಗೆಯಲ್ಲಿ ಶಿಸ್ತು ಮತ್ತು ವೈವಿಧ್ಯತೆ ಮೂಡಿಸುವ ಉದ್ದೇಶವಿದೆ” ಎಂದು ವಿವರಿಸಿದರು.
“ಪೊಲೀಸ್ ಪರೇಡ್ ಹಾಗೂ ವಿದ್ಯುತ್ ಅಲಂಕಾರಕ್ಕೂ ಹೆಚ್ಚಿನ ಮೆರುಗು ನೀಡಲಾಗುತ್ತಿದೆ. ವಿದ್ಯುತ್ ವ್ಯವಸ್ಥೆ ಸುಧಾರಣೆಗೆ ಚೆಸ್ಕಾಂ ಸೇರಿದಂತೆ ಸಂಬಂಧಿಸಿದ ಸಂಸ್ಥೆಗಳು ಸುಮಾರು ₹10 ಕೋಟಿಗೂ ಹೆಚ್ಚು ವೆಚ್ಚ ಮಾಡಿವೆ” ಎಂದು ಹೇಳಿದರು.
ಚಿತ್ರರಂಗಕ್ಕೂ ಪ್ರತ್ಯೇಕ ಟ್ಯಾಬ್ಲೋ
ಕನ್ನಡ ಚಿತ್ರರಂಗದ ಕಲಾವಿದರು, ನಟ–ನಟಿಯರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕನ್ನಡ ನಾಡಿನಲ್ಲಿ ಬೆಳೆದಿರುವ ಚಿತ್ರರಂಗದ ದೊಡ್ಡ ಅಭಿಮಾನಿ ಬಳಗವೂ ದಸರಾ ಸಂಭ್ರಮದ ಭಾಗವಾಗಬೇಕು. ಚಿತ್ರರಂಗಕ್ಕೆ ಪ್ರತ್ಯೇಕ ಟ್ಯಾಬ್ಲೋ ಇರಿಸುವ ಬಗ್ಗೆಯೂ ಸೂಚಿಸಲಾಗಿದೆ” ಎಂದರು.
“ಕರ್ನಾಟಕದ ವಿವಿಧ ಜನಪದ ಹಾಗೂ ಸಾಂಸ್ಕೃತಿಕ ಕಲಾ ಪ್ರಕಾರಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಒಂದೇ ಕಲಾ ತಂಡದ ಹಲವಾರು ಗುಂಪುಗಳನ್ನು ಮೆರವಣಿಗೆಯಲ್ಲಿ ಪುನರಾವರ್ತಿಸುವ ಬದಲು, ಪ್ರತಿಯೊಂದು ಕಲಾ ಪ್ರಕಾರಕ್ಕೂ ಒಂದು ಸಮರ್ಥ ತಂಡವನ್ನು ಒಳಗೊಳ್ಳಿಸುವ ಮೂಲಕ ಕಾರ್ಯಕ್ರಮಕ್ಕೆ ಶಿಸ್ತು ತರಬೇಕು” ಎಂದು ಹೇಳಿದರು.
‘ಅಂತರರಾಷ್ಟ್ರೀಯ ದಸರಾ’ ಹೆಸರಿಗೆ ತಕ್ಕ ಆಕರ್ಷಣೆ
“ದಸರಾ ಕೇವಲ ರಾಜ್ಯದ ಜನರ ಕಾರ್ಯಕ್ರಮವಾಗದೆ, ದೇಶ–ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಹೊಸ ಅನುಭವ ನೀಡುವಂತಿರಬೇಕು. ‘ಅಂತರರಾಷ್ಟ್ರೀಯ ದಸರಾ’ ಎಂಬ ಹೆಸರಿಗೆ ತಕ್ಕಂತೆ ಹೊಸ ಆಕರ್ಷಣೆಗಳನ್ನು ಸೃಷ್ಟಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ” ಎಂದರು.
“ದಸರಾ ಸಂದರ್ಭದಲ್ಲಿ ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಸೇರಿದಂತೆ ಸ್ಥಳೀಯ ವ್ಯಾಪಾರ ವಹಿವಾಟಿಗೂ ದೊಡ್ಡ ಪ್ರಮಾಣದಲ್ಲಿ ಲಾಭವಾಗುತ್ತದೆ. ಹೀಗಾಗಿ ಸರ್ಕಾರದ ಜತೆಗೆ ಹೋಟೆಲ್ ಉದ್ಯಮ ಹಾಗೂ ಇತರ ವಲಯಗಳೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಹನೂರು ಪ್ರಕರಣ ಸಿಓಡಿಗೆ; ತಪ್ಪಿತಸ್ಥರ ವಿರುದ್ಧ ಕ್ರಮ
“ಹನೂರು ಪ್ರಕರಣದ ವರದಿ ಬಂದಿದ್ದು, ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲಾಗಿದೆ. ಸಿಓಡಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸಲಿದ್ದಾರೆ” ಎಂದು ಹೇಳಿದರು.
“ನಾಗೇಂದ್ರ ಪ್ರಕರಣದಲ್ಲಿ ನಿರಪರಾಧಿಯನ್ನು ಬಲಿಪಶು ಮಾಡುವ ಪ್ರಯತ್ನ ನಡೆದಿದೆ. ಪಕ್ಷಕ್ಕಾಗಿ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿರುವ ಅವರ ರಾಜೀನಾಮೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತಿದೆ” ಎಂದು ತಿಳಿಸಿದರು.
ಟೀಕೆ ಸಾಯುತ್ತವೆ, ಕೆಲಸಗಳು ಉಳಿಯುತ್ತವೆ
ವಿರೋಧ ಪಕ್ಷದವರು ಪಾದಯಾತ್ರೆ ನಡೆಸುವುದು ಸೇರಿದಂತೆ ರಾಜಕೀಯವಾಗಿ ಟೀಕೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಅವರಿಗೆ ರಾಜಕಾರಣ ಮುಖ್ಯ. ಆದರೆ ನಮಗೆ ಜನರ ಬದುಕು, ನೀರಾವರಿ, ಬರ ಹಾಗೂ ರಾಜ್ಯದ ಹಿತ ಮುಖ್ಯ” ಎಂದರು.
“ಕಾವೇರಿ ನೀರಿನ ಸಮಸ್ಯೆ, ಬರ ಪರಿಸ್ಥಿತಿ, ತುಂಗಭದ್ರಾ ನೀರಿನ ವಿಚಾರ ಸೇರಿದಂತೆ ರಾಜ್ಯದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ ವಿರೋಧ ಪಕ್ಷದವರು ಈ ವಿಚಾರಗಳ ಬಗ್ಗೆ ಚರ್ಚಿಸಲು ಆಸಕ್ತಿ ತೋರಿಸುತ್ತಿಲ್ಲ” ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ಅವರು ಏನು ಬೇಕಾದರೂ ಮಾತನಾಡಲಿ. ಟೀಕೆ ಮಾಡಲಿ. ಅಸೂಯೆಗೆ ಮದ್ದಿಲ್ಲ. ನಮ್ಮ ಕೆಲಸಗಳು ಉಳಿಯುತ್ತವೆ, ಟೀಕೆಗಳು ಸಾಯುತ್ತವೆ ಎಂಬ ನಂಬಿಕೆ ನನಗಿದೆ” ಎಂದು ಹೇಳಿದರು.
ದಸಾರಾ ಉದ್ಘಾಟನೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ “ಇದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ” ಹಾಗೂ ಕಂಬಳ ಆಯೋಜನೆ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಎಂದಾಗ, “ಕಂಬಳವೂ ರಾಜ್ಯದ ಒಂದು ಭಾಗ. ಕೆಲವರು ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡುವವರು ಮಾಡಲಿ. ನನಗೆ ಆಯೋಜನೆ ಮಾಡಲೇ ಬೇಕು ಎನ್ನುವ ಪ್ರತಿಷ್ಠೆಯೇನಿಲ್ಲ ಎಂದರು.




