Karnataka NewsLatestPolitics

*ಕಾರ್ಗಿಲ್ ವಿಜಯ ದಿವಸ: ಯೋಧರ ಕುಟುಂಬಗಳ ಹಿತ ಕಾಯಲು ನಮ್ಮ ಸರ್ಕಾರ ಬದ್ಧ: ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ನಮ್ಮ ಯೋಧರ ತ್ಯಾಗವೇ ನಮ್ಮ ಧೈರ್ಯ, ಸ್ವಾತಂತ್ರ್ಯ, ಹೆಮ್ಮೆಯಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ನೆಹರೂ ತಾರಾಲಯದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಭಾನುವಾರ ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

“27 ವರ್ಷಗಳ ಹಿಂದೆ ನಮ್ಮ ವೀರ ಯೋಧರು ಹಿಮಾಲಯದ ತಪ್ಪಲಿನಲ್ಲಿ ಶತ್ರುಗಳನ್ನು ಸದೆ ಬಡಿದು ದೇಶದ ತ್ರಿವರ್ಣ ಧ್ವಜ ಹಾರಿಸಿದರು. ನಮ್ಮ ಹೀರೊಗಳು ಹುತಾತ್ಮರಾಗಿರಬಹುದು ಆದರೆ ಅವರ ಪರಂಪರೆ ಶಾಶ್ವತ, ದೇಶಕ್ಕಾಗಿ ಹುತಾತ್ಮರಾದ ನಮ್ಮ ವೀರ ಯೋಧರಿಗೆ ಹೃತ್ಪೂರ್ವಕ ನಮನ” ಎಂದು ತಿಳಿಸಿದರು.

“ನಮ್ಮ ತಾಯ್ನಾಡನ್ನು ರಕ್ಷಿಸಲು 527 ಯೋಧರು ಹುತಾತ್ಮರಾಗಿದ್ದಾರೆ. ಅದರಲ್ಲಿ ಕರ್ನಾಟಕದ 13 ಯೋಧರು ಸೇರಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದು, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಯೋಧರು ಎಲ್ಲಾ ಪರಿಸ್ಥಿತಿಯಲ್ಲೂ ದೇಶದ ರಕ್ಷಣೆಗೆ ಬದ್ಧರಾಗಿದ್ದಾರೆ. ಭಾರತ- ಪಾಕಿಸ್ತಾನ ಯುದ್ಧವಾಗಿರಲಿ, ಭಾರತ- ಚೀನಾ ಯುದ್ಧವಾಗಲಿ, ಗಡಿ ಅತಿಕ್ರಮಣ ಪರಿಸ್ಥಿತಿಯೇ ಆಗಿರಲಿ, ನಮ್ಮ ಯೋಧರು ಕೆಚ್ಚೆದೆಯಿಂದ ದೇಶದ ಗಡಿ ರಕ್ಷಣೆಗೆ ಪ್ರತಿ ಕ್ಷಣ, ದಿನವೂ ಸಿದ್ಧರಾಗಿರುತ್ತಾರೆ” ಎಂದು ಬಣ್ಣಿಸಿದರು.

ಕರ್ನಾಟಕ ನಮ್ಮ ರಕ್ಷಣಾ ವಲಯದ ಬೆನ್ನೆಲುಬು

“ಯೋಧರಿಂದಾಗಿ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಾಗಿ ಮಲಗುತ್ತಿದ್ದೇವೆ. ಭಾರತದ ರಕ್ಷಣಾ ಪಡೆಗೆ ಕರ್ನಾಟಕ ಬೆನ್ನೆಲುಬಾಗಿದೆ. ಬೆಮೆಲ್, ಡಿಆರ್ ಡಿಒ, ಇಸ್ರೋ ಸೇರಿದಂತೆ ಅನೇಕ ಸಂಸ್ಥೆಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾವು ಭಾರತದ ಮೊದಲ ಸೇನಾ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ” ಎಂದರು.

“ಯೋಧರು, ಯುವಕರು, ಮಹಿಳೆಯರು, ರೈತರು ಹಾಗೂ ತೆರಿಗೆದಾರರು ನಮ್ಮ ಕೈಯಲ್ಲಿರುವ ಐದು ಬೆರಳುಗಳಂತೆ. ಈ ಬೆರಳುಗಳು ಸೇರಿದರೆ ದೇಶ ಬಲಿಷ್ಠ ಮುಷ್ಠಿಯಾಗುತ್ತದೆ. ಕಾರ್ಗಿಲ್ ವಿಜಯ್ ದಿವಸ ಬಹಳ ವಿಶೇಷವಾದ ದಿನ. ದೇಶದ ಸ್ವಾತಂತ್ರ್ಯ ಕಾಪಾಡಲು ಏನು ಬೇಕಾದರೂ ಮಾಡಬಲ್ಲೆವು ಎಂಬುದನ್ನು ದೇಶದ ಯುವಕರು ಸಾಬೀತುಪಡಿಸಿದ್ದಾರೆ. ದೇಶದ ಹೊರಗಿನ ಹಾಗೂ ಒಳಗಿನ ದುಷ್ಟ ಶಕ್ತಿಗಳಿಂದ ಭಾರತ ಮಾತೆಗೆ ತೊಂದರೆಯಾಗಲು ಬಿಡುವುದಿಲ್ಲ” ಎಂದು ಹೇಳಿದರು.

ಯೋಧರ ಕುಟುಂಬಗಳ ಹಿತ ಕಾಯಲು ಬದ್ಧ

“ನಮ್ಮ ರಾಜ್ಯದಲ್ಲಿ ಲಕ್ಷಾಂತರ ಯೋಧರ ಕುಟುಂಬಗಳು ನೆಲೆಸಿವೆ. ನಿಮ್ಮ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಲಹೆಗಳು ಏನೇ ಇದ್ದರು ನಮಗೆ ನೀಡಿ. ನಿಮ್ಮ ಸಲಹೆ ಸ್ವೀಕರಿಸಲು ನಮ್ಮ ಸರ್ಕಾರ ಮುಕ್ತವಾಗಿದೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button