Kannada NewsKarnataka NewsLatest

*ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ವಿರುದ್ಧ ಮತ್ತೊಂದು FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ.

ಹಣ ನೀಡಿದವರಿಗೆ ಹುದ್ದೆ ಎಂದು ಆರೋಪಿಸಿ ಪಶು ವೈದ್ಯಾಧಿಕಾರಿ ಮಂಜುನಾಥ ಎಂಬುವರು ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಶಿವಶಂಕರಪ್ಪ ಸಾಹುಕರ್, ಕೆಪಿಎಸ್ ಸಿ ಸದಸ್ಯರು, ಕೆಲ ಅಭ್ಯರ್ಥಿಗಳ ಮೇಲೆ ಎಫ್ ಐ ಆರ್ ದಾಖಲಾಗಿದೆ.

2026 ಜನವರಿಯಲ್ಲಿ ನಡೆದಿದ್ದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಸುಮಾರು 29 ಅಭ್ಯರ್ಥಿಗಳು ಅಕ್ರಮವಾಗಿ ಉತ್ತೀರ್ಣರಾಗಿದ್ದಾರೆ. ಶಿವಶಂಕರಪ್ಪ ಸಂಬಂಧಿ ಸೂಗುರೇಶ್‌ ಜಾಕ ಸೇರಿ 24 ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅನುಮಾನದ ಜೊತೆಗೆ, ಇಂತಹ ಕೆಲ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳು ತರಬೇತಿ ನೀಡಿದ್ದಾರೆ. ಕೆಲವರಿಗೆ OMR ಶೀಟ್ ತಿದ್ದುಪಡಿ ಅಕ್ರಮ ನಡೆಸಿದ್ದಾರೆ ಎಂದು ದೂರಲಾಗಿತ್ತು. ಅಲ್ಲದೆ, ಈ ಬಗ್ಗೆ 80 ಲಕ್ಷ ರೂಪಾಯಿಗಳ ಡೀಲ್ ಆಡಿಯೋ ಕೂಡ ವೈರಲ್ ಆಗಿತ್ತು. ಅಭ್ಯರ್ಥಿಗಳ ಖಾಸಗಿ ಮಾಹಿತಿ, OMR ಶೀಟ್ ಅಂಕಗಳ ಮಾಹಿತಿ ಮಧ್ಯವರ್ತಿಗಳಿಗೆ ಸಿಕ್ಕಿದ್ದರ ಹಿಂದೆ ಆರೋಪಿಗಳ ಕೈವಾಡ ಇದೆ. ಹೀಗಾಗಿ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದಾಖಲಾಗಿದ್ದ ದೂರಿನ ಅನ್ವಯ ವಂಚನೆ ಮತ್ತು ಕರ್ನಾಟಕ ಪಬ್ಲಿಕ್​​ ಎಕ್ಸಾಮಿನೇಷನ್​​ ಆ್ಯಕ್ಟ್​​ ಅಡಿ ಎಫ್​​ಐಆರ್​​ ದಾಖಲಾಗಿದೆ.

ಇನ್ನು ಅಕ್ರಮದ ಬೆನ್ನಲ್ಲೇ ಕೆಪಿಎಸ್ ಸಿಯಲ್ಲಿ ಬದಲಾವಣೆ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಪ್ರತಿಕ್ರಿಯಿಸಿದ್ದು, ಯಾರೂ ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟ ಆಡುವಂತಿಲ್ಲ. ಆಡಳಿತ ವಿಪಕ್ಷದವರು ಎಲ್ಲರು ಸೇರಿ ಕ್ರಾಂತಿ ಮಾಡೋಣ. ಹೊಸ ಕಾನೂನು ಜಾರಿಗೆ ತರೋಣ. ಆ ಮೂಲಕ ಕೇಂದ್ರ, ರಾಜ್ಯದಲ್ಲಿ ಪಾರದರ್ಶಕವಾದ ನೇಮಕಾತಿ ವ್ಯವಸ್ಥೆ ಜಾರಿಗೆ ಮಾಡೋಣ ಎಂದವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button