ಪ್ರಗತಿವಾಹಿನಿ ಸುದ್ದಿ; ಧಾರವಾಡ : ಪ್ರಸ್ತುತ ಭಾರತವು ಅತ್ಯಧಿಕ ಪ್ರಮಾಣದ ಅಡಿಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಿ ದೇಶವು ಸ್ವಾವಲಂಬನೆಯನ್ನು ಸಾಧಿಸಲು ಅಧಿಕ ಪ್ರಮಾಣದ ಕುಸುಬೆ ಬೆಳೆಯಲು ಮುಂದಾಗಬೇಕೆಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ರೈತರಿಗೆ ಕರೆ ನೀಡಿದರು.
ಅವರು ಗುರುವಾರ ಇಲ್ಲಿಯ ಕೃಷಿ ವಿಶ್ವವಿದ್ಯಾಲಯ ಹಾಗೂ ಜೀರಿಗವಾಡದ ಧಾರವಾಡ ತಾಲೂಕಾ ಫಾರ್ಮರ್ಸ ಪ್ರೊಡ್ಯೂಸರ್ಸ ಕಂಪನಿಯ ಸಂಯುಕ್ತ ಆಶ್ರಯದಲ್ಲಿ ನೈಸರ್ಗಿಕ ಕೃಷಿ ಮತ್ತು ಕುಸುಬೆ ಎಣ್ಣೆಕಾಳು ಬೆಳೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿತ್ತಿದ್ದರು.
ಇಂದು ಕಡಿಮೆ ಬೆಲೆಗೆ ಲಭ್ಯವಾಗುವ ಅಡಿಗೆ ಎಣ್ಣೆಯು ಮನುಷ್ಯನ ದೈಹಿಕ ಆರೋಗ್ಯಕ್ಕೆ ಪೂರಕವಾಗಿಲ್ಲದಿರುವುದು ಕಂಡುಬಂದಿದೆ. ಹಾಗಾಗಿ ಮತ್ತೆ ನಾವಿಂದು ಹಳೆಯ ಪದ್ಧತಿಯಂತೆ ಎಣ್ಣೆ ಗಾಣಗಳ ಮೂಲಕ ಉತ್ಪಾದಿಸಿದ ಕುಸುಬೆ ಎಣ್ಣೆಯನ್ನೇ ಅಡಿಗೆಗೆ ಬಳಸಬೇಕೆಂಬ ವಿಚಾರ ಹೆಚ್ಚು ಹರಿದಾಡುತ್ತಿದೆ. ಸುಧಾರಿತ ಕೃಷಿ ವಿಜ್ಞಾನದ ವಿಚಾರಗಳನ್ನು ಅರಿತು ಸಮಸ್ತ ರೈತ ಬಾಂಧವರು ಹೆಚ್ಚೆಚ್ಚು ಕುಸುಬೆ ಬೆಳೆಯ ಬೇಸಾಯಕ್ಕೆ ತಮ್ಮ ಜಮೀನುಗಳಲ್ಲಿ ಅವಕಾಶ ಕಲ್ಪಸಬೇಕೆಂದು ಬೆಲ್ಲದ ಮನವಿ ಮಾಡಿದರು.
ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿಮೌಳಿ ಕುಲಕರ್ಣಿ ಮಾತನಾಡಿ, ಕುಸುಬೆ ಒಂದು ಅತ್ಯುತ್ತಮ ಎಣ್ಣೆಕಾಳು ಎಂಬುದು ವ್ಯಾಪಕವಾಗಿ ಸ್ವೀಕೃತಿಯಾಗಿದ್ದು, ಈಗ ಎಲ್ಲೆಡೆ ಕುಸುಬೆ ಬೇಸಾಯಕ್ಕೆ ಒತ್ತು ನೀಡಬೇಕಾಗಿದೆ. ಪ್ರಸ್ತುತ ರೈತರು ಯಂತ್ರಗಳ ಮೂಲಕ ಬಹಳ ಸುಲಭವಾಗಿ ಕುಸುಬೆ ಒಕ್ಕಲು ಮಾಡಬಹುದಾಗಿದ್ದು, ಹೆಚ್ಚೆಚ್ಚು ಕುಸುಬೆ ಬೆಳೆಯಲು ಮನಸ್ಸು ಮಾಡಬೇಕು ಎಂದರು.
ವರ್ಚುವಲ್ ವೇದಿಕೆಯ ಮೂಲಕ ಮಾಹಿತಿ ಹಂಚಿಕೊಂಡ ಆರ್ಟ ಆಫ್ ಲಿವಿಂಗ್ ಕೃಷಿ ವಿಭಾಗದ ಮುಖ್ಯಸ್ಥ ಉದಯಕುಮಾರ ಕೊಳ್ಳಿಮಠ, ನಮ್ಮ ರೈತ ಸಮೂಹ ಅತ್ಯಧಿಕ ಕುಸುಬೆ ಬೇಸಾಯಕ್ಕೆ ಮುಂದಾದಾಗ ಮಾತ್ರ ಧಾರವಾಡ ಕೃಷಿ ವಿ.ವಿ. ಆವರಣದಿಂದ ಆರಂಭವಾಗಿರುವ ಕುಸುಬೆ ಪುರುಜ್ಜೀವನ ಅಭಿಯಾನವು ವಿಶ್ವವ್ಯಾಪಿಯಾಗಿ ಪಸರಿಸಲು ಸಾಧ್ಯವಾಗುತ್ತದೆ. ಭಾರತದ ನೆಲದಲ್ಲಿ ರೈತರು ಅತ್ಯಧಿಕ ಪ್ರಮಾಣದಲ್ಲಿ ಕುಸುಬೆ ಬೆಳೆಯಲು ಮನಸ್ಸು ಮಾಡಿದರೆ ದೇಶವು ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುತ್ತದೆ ಎಂದರು.
ರಾಷ್ಟ್ರೀಯ ಕುಸುಬೆ ದಿನ :
ಕುಸುಬೆ ಪುರುಜ್ಜೀವನ ಅಭಿಯಾನವನ್ನು ಹುಟ್ಟು ಹಾಕಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ವಿದ್ಯಾ ವ್ಹಿ. ಎಂ. ಮಾತನಾಡಿ, ಹೊಸತು ಕೃಷಿ ಬೆಳೆಗಳ ಬೇಸಾಯದ ಮೂಲಕ ರೈತರ ಆದಾಯ ದ್ವಿಗುಣಗೊಳ್ಳಬೇಕೆಂಬುದು ಪ್ರದಾನಿ ನರೇಂದ್ರ ಮೋದಿಜಿ ಅವರ ಸಂಕಲ್ಪವಾಗಿದೆ. ಕೇಂದ್ರ ಸರಕಾರದ ಮುದ್ರಾ ಯೋಜನೆಯಡಿ ಗಾಣದ ಮೂಲಕ ಎಣ್ಣೆ ತೆಗೆಯುವ ಯಂತ್ರಗಳ ಖರೀದಿಗೆ ಅವಕಾಶವಿದ್ದು, ಮತ್ತೆ ಮೊದಲಿನಂತೆ ಎಣ್ಣೆ ಗಾಣದ ಉದ್ಯೋಗ ಮುನ್ನೆಲೆಗೆ ಬರಬೇಕು. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆಗೆ ಪೂರಕ ಅಂಶಗಳು ಕುಸುಬೆ ಎಣ್ಣೆಯಲ್ಲಿವೆ. ನಮ್ಮ ರೈತರು ಅತ್ಯಧಿಕ ಪ್ರಮಾಣದ ಕುಸುಬೆ ಬೆಳೆಯಲು ಆರಂಭಿಸಿದರೆ ದೇಶವು ಪ್ರತೀ ವರ್ಷ 14 ಮಿಲಿಯನ್ ಟನ್ ಖಾದ್ಯ ತೈಲ ಆಮದು ಮಾಡುತ್ತಿದ್ದು, ಇದು ನಿಲ್ಲುತ್ತದೆ. ನಸಿಸಿ ಹೋಗುತ್ತಿರುವ ಕುಸುಬೆ ಬೀಜಗಳ ಉಳಿವಿಗಾಗಿ ಕೇಂದ್ರ ಸರಕಾರ ಪ್ರತೀ ವರ್ಷ ಅಕ್ಟೋಬರ್-1 ರಂದು ‘ರಾಷ್ಟ್ರೀಯ ಕುಸುಬೆ ದಿನ’ ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಸಮಾರೋಪ ಭಾಷಣ ಮಾಡಿದ ಕೃಷಿ ವಿ.ವಿ. ಕುಲಪತಿ ಡಾನ್.ಪಿ.ಎಲ್. ಪಾಟೀಲ, ಕುಸುಬೆ ಬೇಸಾಯಕ್ಕೆ ಯೋಗ್ಯವಾದ ಮಣ್ಣಿನ ವಿಚಾರವಾಗಿ ನಾವು ವಿಭಿನ್ನ ಸಂಶೋಧನೆ ನಡೆಸಿದ್ದು, ರೈತರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಕುಸುಬೆ ಎಣ್ಣೆಕಾಳು ಬೇಸಾಯಕ್ಕೆ ಮಾರ್ಗದರ್ಶನ ಮಾಡಲಾಗುತ್ತಿದೆ. ಬರುವ ವರ್ಷದಿಂದ ಇನ್ನಷ್ಟು ವ್ಯಾಪಕವಾಗಿ ಕುಸುಬೆ ಬೆಳೆಯ ಬೇಸಾಯಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಾದ ಡಾ.ಸುನೀಲ ಹಳಕಟ್ಟಿ, ಡಾ. ಸಿ.ಎಂ. ರಫಿ, ಡಾ. ನಾಗಭೂಷಣ ನಾಯ್ಡು, ಡಾ.ಪ್ರಭಾವತಿ ರಾವ್, ಡಾ. ಬಲಕುಂದಿ ಸಂಗಶೆಟ್ಟಿ, ಸುಧಾ ಮಂಕಣಿ, ಪ್ರಗತಿಪರ ರೈತರಾದ ರಾಜು ಕೊಂಗನವರ ಹಾಗೂ ಪ್ರಸನ್ನ ಮೂರ್ತಿ ಕುಸುಬೆ ಬೇಸಾಯ ಮತ್ತು ಅಧಿಕ ಇಳುವರಿಯ ಹಲವಾರು ಮಹತ್ವದ ವೈಜ್ಞಾನಿಕ ವಿಚಾರಗಳನ್ನು ಹಂಚಿಕೊಂಡರು.
ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ವೈ.ಎನ್. ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಪಾಟೀಲ, ಬಿಜೆಪಿ ರೈತ ಮುಖಂಡ ಪ್ರಭಾಕರ ದೇಶಪಾಂಡೆ ಇತರರು ಇದ್ದರು.
ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ವಿಚಾರ; ಸ್ಪಷ್ಟನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
https://pragati.taskdun.com/muslim-woman-collegeshashikala-jolleclarification/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ