ಕಾಕತಿ ಕೋಟೆಗೇಕೆ ಈ ದುರ್ಗತಿ?; ರಾಣಿ ಚನ್ನಮ್ಮನ ತವರಿಗೂ ಸಿಗಲಿ ಕಾಯಕಲ್ಪ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೀರ ರಾಣಿ ಕಿತ್ತೂರು ಚನ್ನಮ್ಮನ ಉತ್ಸವದ ದಿನಗಳು ಸಮೀಪಿಸುತ್ತಿದ್ದು ಆಡಳಿತ ಕೂಡ ನಾನಾ ರೀತಿಯಲ್ಲಿ ಸಿದ್ಧತೆ ನಡೆಸಿದೆ. ರಾಣಿ ಆಳ್ವಿಕೆ ನಡೆಸಿದ ಕಿತ್ತೂರು ಝಗಮಗಿಸತೊಡಗಿದೆ. ವೀರಜ್ಯೋತಿ ಯಾತ್ರೆ ಜಿಲ್ಲೆಯ ಎಲ್ಲೆಡೆ ಸಂಚರಿಸಿ ಜನರಲ್ಲಿ ಸ್ಫೂರ್ತಿ ಮೂಡಿಸುತ್ತಿದೆ. ಆದರೆ ಇತ್ತ ವೀರ ವನಿತೆಯ ತವರೂರಲ್ಲಿ ಆಕೆಯ ಕುರುಹುಗಳ ದುಸ್ಥಿತಿ ಕಂಡಾಗ ಉತ್ಸವ ಎಷ್ಟು ಔಚಿತ್ಯಪೂರ್ಣ ಎಂಬ ಪ್ರಶ್ನೆ ಬಾರದಿರದು.
ಕಿತ್ತೂರು ಭಾಗದಲ್ಲಿ ರಾಣಿ ಚನ್ನಮ್ಮನ ಉತ್ಸವಕ್ಕೆ ಎಷ್ಟು ಸಂಭ್ರಮವಿರುತ್ತದೋ ಅಷ್ಟೇ ಆಕೆಯ ತವರು ಕಾಕತಿಯಲ್ಲೂ ಜನ ಪ್ರತಿ ವರ್ಷ ಉತ್ಸವವನ್ನು ಆಚರಿಸಲು ಕಾತುರರಾಗಿರುತ್ತಾರೆ. ಆದರೆ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎಂಬಂಥ ಸರಕಾರದ ಧೋರಣೆಯಿಂದ ಕಾಕತಿ ನಿರ್ಲಕ್ಷ್ಯಿಸಲ್ಪಟ್ಟಿದೆ.
‘ಕಾಕತಿ ಕಿಲ್ಲಾ’ ಎಂದೇ ಕರೆಯಲಾಗುವ ಚನ್ನಮ್ಮನ ಕೋಟೆಯ ಸ್ಥಿತಿ ದಯನೀಯವಾಗುತ್ತ ಸಾಗಿದೆ. ಕೋಟೆ ತಲುಪಲು ಮೆಟ್ಟಿಲುಗಳ ಬದಿ ಅಳವಡಿಸಿರುವ ಸ್ಟೀಲ್ ರೇಲಿಂಗ್‌ಗಳು ಕಳ್ಳರ ಪಾಲಾಗಿವೆ. ಕೋಟೆ ಸುತ್ತಮುತ್ತ ಗಿಡಗಂಟಿಗಳು, ಪೊದೆಗಳು ಬೆಳೆದು ನಿಂತಿದೆ. ಶ್ರಮವಿಲ್ಲದೆ ಶ್ರಮದಾನದ ಪ್ರಚಾರ ಪಡೆಯುವ ಬದಲು ಇಲ್ಲಿ ನಿಜವಾದ ಶ್ರಮದಾನ ಮಾಡಿದಲ್ಲಿ ವೀರರಾಣಿಗೂ. ದೇಶಕ್ಕೂ ಗೌರವ ಸಲ್ಲಿಸಿದಂತಾಗುತ್ತದೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ.
ಈ ಕೋಟೆಗೆ ಸರಿಯಾದ ರಸ್ತೆ ಇಲ್ಲ. ಅಲ್ಲಿ ಎಸೆದಿರುವ ಮದ್ಯದ ಬಾಟಲಿಗಳು, ಸ್ನ್ಯಾಕ್ಸ್ ಪ್ಯಾಕೆಟ್‌ಗಳು, ಸಿಗರೇಟ್ ಬಾಕ್ಸ್‌ಗಳು, ಫುಡ್ ಬಾಕ್ಸ್‌ಗಳು ಇಂಥ ಸುಶಿಕ್ಷಿತ ನಾಗರಿಕ ಜಗತ್ತಿನಲ್ಲೂ ಈ ಬಗೆಯ ಜನರಿದ್ದಾರಾ? ಎಂದು ಅಸಹ್ಯ ಪಡುವಂತೆ ಮಾಡುತ್ತವೆ.
ಸರಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ನೂರಾರು, ಸಾವಿರಾರು ಕೋಟಿ ವ್ಯಯಿಸುತ್ತಿದ್ದರೂ ನಾಡಿನ ಹೆಮ್ಮೆಯ ಇತಿಹಾಸ ಸಾರಿ ಹೇಳುವ ಇಂಥ ಪ್ರಮುಖ ತಾಣಗಳು ಈ ರೀತಿಯ ದುಸ್ಥಿತಿಯಲ್ಲಿದ್ದರೆ ಪ್ರಯೋಜನವೇನು? ಎಂಬುದು ಈ ಭಾಗದ ಜನತೆಯ ಪ್ರಶ್ನೆ.
ಜಾಗತಿಕ ಇತಿಹಾಸದಲ್ಲಿ ಅಚ್ಚಳಿಯದ ಪುಟಗಳನ್ನು ತೆರೆದಿಟ್ಟು ಹೋದ ವೀರ ರಾಣಿ ಚನ್ನಮ್ಮನ ತವರಿನ ಅಭಿವೃದ್ಧಿಗೂ ಸರಕಾರ ಆದ್ಯತೆ ನೀಡಬೇಕಿದೆ. ಪ್ರವಾಸೋದ್ಯಮಕ್ಕೆ ಸಾರ್ವಜನಿಕರನ್ನು ಆಕರ್ಷಿಸಲು ನಾವು ಕೋಟೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ