CrimeKannada NewsKarnataka NewsLatest

*ಇಬ್ಬರು ಮಕ್ಕಳನ್ನು ಮಹಿಳೆ ಬಾವಿಗೆ ಎಸೆದ ಪ್ರಕರಣಕ್ಕೆ ಹೊಸ ತಿರುವು*:

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಆರೋಪ ಎದುರಿಸುತ್ತಿರುವ ನೂರುನ್ನಿಸಾ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಗೂ ಮುನ್ನ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಹೇಳಿದ್ದು, ಹೆದರಿಕೆ, ಭಯ, ಆತಂಕ ಮತ್ತು ಒಂಟಿತನದ ಬಗ್ಗೆ ಆಕೆ ಪತಿ ಸಿನಾನ್ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಆದರೆ ನೂರುನ್ನಿಸಾಗೆ ಯಾವುದೇ ನಿರ್ದಿಷ್ಟ ಮಾನಸಿಕ ಆರೋಗ್ಯ ಸಮಸ್ಯೆ ಇತ್ತು ಎಂಬುದನ್ನು ಈ ಹಂತದಲ್ಲಿ ದೃಢಪಡಿಸಲಾಗಿಲ್ಲ.

ನೂರುನ್ನಿಸಾ ತನ್ನ ಇಬ್ಬರು ಮಕ್ಕಳೊಂದಿಗೆ ಹಾಗೂ ನಾದಿನಿಯ ಮೂವರು ಮಕ್ಕಳೊಂದಿಗೆ ಆತ್ಮೀಯವಾಗಿಯೇ ಇದ್ದಳು ಎನ್ನಲಾಗಿದೆ. ಆದರೆ ಘಟನೆಗೂ ಸುಮಾರು ಒಂದು ವಾರದ ಹಿಂದೆ ಆಕೆ ಮನೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತನ್ನೊಳಗಿನ ಹೆದರಿಕೆ, ಭಯ, ಆತಂಕ ಹಾಗೂ ಒಂಟಿತನದ ಭಾವನೆಗಳ ಬಗ್ಗೆ ಪತಿ ಸಿನಾನ್ ಬಳಿ ನೂರುನ್ನಿಸಾ ಹೇಳಿಕೊಂಡಿದ್ದಳು ಎನ್ನಲಾಗಿದೆ. ಮನೆಯವರೊಂದಿಗೆ ಮಾತ್ರ ಎಂದಿನಂತೆ ಖುಷಿಯಾಗಿ ಮತ್ತು ಆಪ್ತವಾಗಿಯೇ ವರ್ತಿಸುತ್ತಿದ್ದಳು ಎಂದು ಸ್ಥಳೀಯರು ಹೇಳಿದ್ದಾರೆ.

ಸೆಪ್ಟೆಂಬರ್ 19ರಂದು ಮಧ್ಯಾಹ್ನ ನಾದಿನಿ ನಮಾಜ್‌ಗೆ ತೆರಳಿದ್ದ ವೇಳೆ ನೂರುನ್ನಿಸಾ, ನಾದಿನಿಯ ಮೂರು ವರ್ಷದ ಮಗು ರಭಿಹನನ್ನು ಬಾವಿಗೆ ಎಸೆದಿದ್ದಾಳೆ. ಬಳಿಕ ತನ್ನ ಮೂರು ವರ್ಷದ ಮಗು ಆಲಿಯಾಳನ್ನೂ ಬಾವಿಗೆ ಎಸೆದಿದ್ದಾಳೆ ಎನ್ನಲಾಗಿದೆ. ನಂತರ ಮೂರನೇ ಮಗುವನ್ನು ಬಾವಿಗೆ ಎಸೆಯಲು ಮುಂದಾದಾಗ ನಾದಿನಿ ಬಂದು ತಡೆದಿದ್ದಾಳೆ.

ಘಟನೆಯ ಬಳಿಕ ನೂರುನ್ನಿಸಾ ತನ್ನ ಪತಿ ಸಿನಾನ್ ಹಾಗೂ ತಾಯಿಗೆ ಕರೆ ಮಾಡಿ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಪೊಲೀಸರ ವಿಚಾರಣೆಯಲ್ಲೂ ಮಕ್ಕಳನ್ನು ಬಾವಿಗೆ ಎಸೆದಿರುವುದನ್ನು ಆಕೆ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಆದರೆ ಮಕ್ಕಳನ್ನು ಬಾವಿಗೆ ಎಸೆದಿರುವುದಕ್ಕೆ ನಿಖರ ಕಾರಣವೇನು ಎಂಬುದನ್ನು ಆಕೆ ಪೊಲೀಸರಿಗೆ ಸ್ಪಷ್ಟವಾಗಿ ತಿಳಿಸಿಲ್ಲ ಎನ್ನಲಾಗಿದೆ.

ಮಕ್ಕಳನ್ನು ಬಾವಿಗೆ ಎಸೆದ ಬಳಿಕವೂ ನೂರುನ್ನಿಸಾ ವಿಚಿತ್ರವಾಗಿ ವರ್ತಿಸುತ್ತಿದ್ದಳು ಎಂದು ಕುಟುಂಬಸ್ಥರು ಹೇಳಿದ್ದಾರೆ. ಐದು ವರ್ಷಗಳ ಹಿಂದೆ ಸಿನಾನ್ ಅವರನ್ನು ವಿವಾಹವಾಗಿದ್ದ ನೂರುನ್ನಿಸಾ, ಪತಿಯೊಂದಿಗೆ ಅನ್ಯೋನ್ಯವಾಗಿದ್ದು, ಸುಖ ಸಂಸಾರ ನಡೆಸುತ್ತಿದ್ದಳು. ದಂಪತಿಗೆ ಮೂರೂವರೆ ವರ್ಷದ ಗಂಡು ಮಗು ಸೇರಿದಂತೆ ಎರಡು ತಿಂಗಳ ಮತ್ತೊಂದು ಮಗು ಕೂಡ ಇತ್ತು. ಇಂತಹ ಸಂದರ್ಭದಲ್ಲಿ ಏಕಾಏಕಿ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿರುವುದು ಕುಟುಂಬಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನೂರುನ್ನಿಸಾಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಾಥಮಿಕವಾಗಿ, ಘಟನೆಗೂ ಮುನ್ನ ನೂರುನ್ನಿಸಾ ಮತ್ತು ಪತಿ ಸಿನಾನ್ ನಡುವೆ ಫೋನ್‌ನಲ್ಲಿ ಜಗಳ ನಡೆದಿತ್ತು ಎನ್ನಲಾಗಿತ್ತು. ವೈವಾಹಿಕ ಕಲಹದ ಬಳಿಕ ಕೋಪಗೊಂಡ ನೂರುನ್ನಿಸಾ ತನ್ನ ಮೂರೂವರೆ ವರ್ಷದ ಮಗು ಆಲಿಯಾ ಹಾಗೂ ನಾದಿನಿಯ ಮೂರು ವರ್ಷದ ಮಗು ರಭಿಹನನ್ನು ಬಾವಿಗೆ ಎಸೆದಿದ್ದಾಳೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು.

ಘಟನೆಯಲ್ಲಿ ರಭಿಹ ಮೃತಪಟ್ಟಿದ್ದು, ಆಲಿಯಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ನೂರುನ್ನಿಸಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

Related Articles

Back to top button