ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಘಟ್ಟ ಸಾಲಿನಲ್ಲಿ ಮಳೆ ಜೋರಾಗಿಯೇ ಸುರಿಯುತ್ತಿದ್ದು ಮಲೆನಾಡು ಭಾಗದಲ್ಲಿ ಅವಾಂತರವನ್ನೇ ಸೃಷ್ಟಿಸಿದೆ.
ಮಳೆ ಎಡಬಿಡದೇ ಸುರಿಯುತ್ತಿದ್ದು ಜುಲೈ 21 ಮತ್ತು 22 ರಂದು ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ.
ಕರಾವಳಿ, ಮಲೆನಾಡಲ್ಲಿ ವರ್ಷಧಾರೆ ಮುಂದುವರೆಯಲಿದೆ. ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಇಂದು (ಜುಲೈ 21) ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಜೋರು ಮಳೆಯ ಮುನ್ಸೂಚನೆ ನೀಡಲಾಗಿದ್ದು ಈ ಜಿಲ್ಲೆಗಳಲ್ಲಿ ಜುಲೈ 21 ಮತ್ತು 22 ಆರೆಂಜ್ ಅಲರ್ಟ್ ಘೋಷಿಸಲಾಗಿದೆ
ಉಡುಪಿ ಜಿಲ್ಲೆಯಲ್ಲಿ ಸರಾಸರಿ 151 ಮಿಲಿಮೀಟರ್ ಮಳೆಯಾಗಿದ್ದು ಕಾರ್ಕಳದಲ್ಲಿ 202 ಮಿ.ಮೀ ಮಳೆಯಾಗಿದೆ. ಹೆಬ್ರಿಯಲ್ಲಿ 169 ಮಿಲಿಮೀಟರ್, ಕುಂದಾಪುರ 125 ಮಿ.ಮೀ, ಉಡುಪಿ 131, ಬೈಂದೂರು 114, ಬ್ರಹ್ಮಾವರ 137 ಮಿ.ಮೀ, ಕಾಪು ತಾಲೂಕು 177 ಮಿಲಿಮೀಟರ್ ಮಳೆಯಾಗಿದ್ದು ಅಲ್ಲಲ್ಲಿ ಮನೆ ಕುಸಿತ, ತೋಟಕ್ಕೆ ನೀರು ನುಗ್ಗಿರುವುದು, ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ ಸೇರಿದಂತೆ ಹಲವು ಅವಾಂತರಗಳು ಸೃಷ್ಟಿಯಾಗಿದೆ
ಸುರಿಯುತ್ತಿರುವ ಮಳೆಯಿಂದ ಉತ್ತರ ಕನ್ನಡದ ಅಂಕೋಲದಲ್ಲಿ ಗುಡ್ಡ ತೆರವು ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು ಕುಮಟಾದಲ್ಲೂ ಗುಡ್ಡ ಕುಸಿತ ಆಗಿದೆ. ಅತ್ತ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಕೊಡಗು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಒಂದೇ ಸಮನೆ ಸುರಿಯುತ್ತಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ